

ಮುದ್ದೇಬಿಹಾಳ: ವಿವಿಧ ಬೇಡಿಕೆ ಈಡೇರಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳು ನಾಲ್ಕು ದಿನಗಳಿಂದ ಹೋರಾಟ ನಡೆಸುತ್ತಿದ್ದಾರೆ. ಇದರಿಂದಾಗಿ ಕಂದಾಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕರ ದಿನನಿತ್ಯದ ಕಾರ್ಯಗಳಿಗೆ ತೊಂದರೆ ಆಗಿದೆ. ಸರ್ಕಾರ ಕೂಡಲೇ ಅವರ ಬೇಡಿಕೆ ಈಡೇರಿಸಲು ಕ್ರಮ ಕೈಕೊಳ್ಳಬೇಕು ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಗುಂಡಕನಾಳ ನಾಗೂರ ಆಗ್ರಹಿಸಿದರು.
ತಾಲೂಕು ಆಡಳಿತ ಸೌಧ ಎದುರು ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬಿಜೆಪಿ ಮುದ್ದೇಬಿಹಾಳ ಮಂಡಲ ವತಿಯಿಂದ ಬೆಂಬಲ ಸೂಚಿಸಿ ಮಾತನಾಡಿದರು.
ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಬಿಜೆಪಿ ಮಹಿಳಾ ಘಟಕದ ತಾಲೂಕಾಧ್ಯಕ್ಷೆ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೌರಮ್ಮ ಹುನಗುಂದ, ಪುರಸಭೆ ಮಾಜಿ ಸದಸ್ಯ ರಾಜು ಬಳ್ಳೊಳ್ಳಿ, ಪರಶುರಾಮ ನಾಲತವಾಡ, ಅಶೋಕ ಚಿನಿವಾರ, ಪ್ರೀತಿ ಕಂಬಾರ, ಪ್ರೇಮಾ ಕಂಬಾರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.
ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಮನೋಜ ರಾಠೋಡ, ಕಂದಾಯ ನಿರೀಕ್ಷಕ, ರಾಜ್ಯ ಸರ್ಕಾರಿ ನೌಕರರ ಸಂಘದ ಪ್ರತಿನಿಧಿ ವೆಂಕಟೇಶ ಅಂಬಿಗೇರ, ಮಹಾಂತೇಶ ಮಾಗಿ ಧರಣಿಯಲ್ಲಿ ಪಾಲ್ಗೊಂಡಿದ್ದರು.