

ರಾಯಚೂರು ಕೇಂದ್ರ ಸರ್ಕಾರದ ಕಾರ್ಮಿಕ, ನೌಕರರ ವಿರೋಧಿ ಧೋರಣೆ ಖಂಡಿಸಿ ಜೂ.9 ರಂದು ನಡೆಯಲಿರುವ ದೇಶವ್ಯಾಪಿ ಮುಷ್ಕರಕ್ಕೆ ನಮ್ಮ ಬೆಂಬಲವಿದೆಂದು ನೌಕರರ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಶೋಭಾ ಲೋಕನಾಗಣ್ಣ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರ ಹೊಸದಾಗಿ 2004 ರಿಂದ ರೂಪಿಸಿರುವ ಎನ್‌ಪಿಎಸ್ ಯೋಜನೆ ಹಾಗೂ ಪಿಎಫ್‌ಆರ್‌ಡಿ ಯೋಜನೆಗಳಿಂದ ನೌಕರರಿಗೆ ತೊಂದರೆಯಾಗುತ್ತಿದ್ದು ನಿಶ್ಚಿತ ಪಿಂಚಣಿ ಯೋಜನೆ ಮರು ಜಾರಿಗೊಳಿಸುವಂತೆ ಆಗ್ರಹಿಸಿ ಮುಷ್ಕರ ನಡೆಯಲಿದೆ. ದೇಶದಲ್ಲಿ 60 ಲಕ್ಷ ,ರಾಜ್ಯದಲ್ಲಿ 2 ಲಕ್ಷ 8 ಸಾವಿರ ಸರ್ಕಾರಿ ಹುದ್ದೆಗಳು ಖಾಲಿಯಿದ್ದು ನೇರ ನೇಮಕಾತಿ ಮಾಡಿಕೊಳ್ಳಬೇಕು.
ಆಡಳಿತ ಸುಧಾರಣಾ ಆಯೋಗ ಶಿಫಾರಸ್ಸುಗಳನ್ನು ರದ್ದುಗೊಳಿಸಬೇಕು. 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿ ಮುಂದಾಗಿರುವ ಸರ್ಕಾರ ಖಾಯಂ ಶಿಕ್ಷಕರನ್ನು ನೇರ ನೇಮಕಾತಿ ಮಾಡಿಕೊಳ್ಳುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಗುತ್ತದೆ. ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷ ಎಚ್.ಎಸ್.ಜಯಕುಮಾರ ಮಾತನಾಡಿ,ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆಗಳನ್ನು ಅಸ್ಥಿರಗೊಳಿಸಿ ನಾಲ್ಕು ಸಂಹಿತೆಗಳನ್ನು ಜಾರಿಗೆ ತರುವದನ್ನು ಕೈ ಬಿಡಬೇಕಿದೆ. ಎಲ್ಲ ಸರ್ಕಾರಿ ಯೋಜನೆಗಳನ್ನು ಖಾಸಗೀಕರಣಗೊಳಿಸುವದನ್ನು ಕೈ ಬಿಡುವಂತೆ ಆಗ್ರಹಿಸಿ ಹೋರಾಟ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಅಮರೇಶಪ್ಪ, ಮೈನುದ್ದೀನ್, ಬಸವರಾಜ, ಚಂದ್ರಶೇಖರ, ಅಲಂ ಖಾನ್, ಇಸ್ಮಾಯಿಲ್ ಇದ್ದರು.