ವೈದ್ಯಕೀಯ ಕಾಲೇಜ್ ಹೋರಾಟಕ್ಕೆ ಬೆಂಬಲ, ಹೋರಾಟಗಾರರ ಬಗ್ಗೆ ಹಗುರ ಮಾತು ಬೇಡ, ಶಾಸಕ ಯಶವಂತರಾಯಗೌಡ ಪಾಟೀಲ ಸೂಕ್ಷ್ಮ ಸಂದೇಶ ರವಾನಿಸಿದ್ದು ಯಾರಿಗೆ?

YASHAVANTRAYAGOUDA PATIL SUPPORT MEDICAL COLLEGE PROTEST
ವಿಜಯಪುರ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಹೋರಾಟಗಾರರು ಮನವಿ ಸಲ್ಲಿಸಿದರು. ಮುಖಂಡರಾದ ಎಸ್.ಎಂ. ಪಾಟೀಲ ಗಣಿಹಾರ, ಸಿದ್ದಲಿಂಗ ಬಾಗೇವಾಡಿ, ಸುರೇಶ ಬಿಜಾಪುರ ಮತ್ತಿತರರಿದ್ದಾರೆ.
Published on

ವಿಜಯಪುರ: ಸರ್ಕಾರದ ವೈದ್ಯಕೀಯ ಕಾಲೇಜ್ ಹೋರಾಟದ ವಿಚಾರದಲ್ಲಿ ರಾಜಕೀಯ ಬೆರೆಸಿ ಮಾತನಾಡುವುದು ಸರಿಯಲ್ಲ; ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡಬಾರದು, ಅಧಿಕಾರ ಹೋಗುತ್ತದೆ-ಬರುತ್ತದೆ ಆದರೆ ನಾವು ಹೋದ ಮೇಲೂ ನಮ್ಮ ಕಾರ್ಯವನ್ನು ಜನ ಸ್ಮರಿಸಬೇಕು, ರಾಜಮಹಾರಾಜರೇ ಉಳಿದಿಲ್ಲ, ಅಂಥದರಲ್ಲಿ ನಾವು-ನೀವು ಯಾವ ಲೆಕ್ಕ ? ಈ ಮಾತನ್ನು ಸೂಕ್ಷ್ಮವಾಗಿ ಯಾರಿಗೆ ಹೇಳಬೇಕೋ ಅವರಿಗೆ ಹೇಳುತ್ತೇನೆಂದು ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾರ್ಮಿಕವಾಗಿ ಮಾತನಾಡಿದರು.

ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಹೋರಾಟ ಸಮಿತಿಯಿಂದ ಪಿಪಿಪಿ ಮಾದರಿ ವಿರೋಧಿಸಿ ಕಳೆದ 19 ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ಸೋಮವಾರ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಸಣ್ಣ ಮಗುವಿನ ಭಾವನೆಗಳಿಗೂ ಗೌರವ ಕೊಟ್ಟು ಸ್ಪಂದಿಸಬೇಕಾಗಿರುವುದು ನಮ್ಮಂಥ ಜನಪ್ರತಿನಿಧಿಗಳ ಕರ್ತವ್ಯ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಡೆಯುತ್ತಿರುವ ಹೋರಾಟ ಅರ್ಥಪೂರ್ಣವಾದುದು. ಈ ಹೋರಾಟ ಸದಾಶಯದಿಂದ ಕೂಡಿದೆ. ಇದರಲ್ಲಿ ರಾಜಕೀಯ ಬೆರೆಸಬಾರದು. ಹೋರಾಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ನಾನಂತೂ ಹೋರಾಟಗಾರರ ಜೊತೆಗೆ ನಿರಂತರವಾಗಿರುವುದಲ್ಲದೇ ಸರ್ಕಾರದ ಮಟ್ಟದಲ್ಲಿ ಧ್ವನಿ ಎತ್ತುವುದಾಗಿ ತಿಳಿಸಿದರು.

ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜ್ ಸ್ಥಾಪಿಸಬೇಕೆಂಬುದು ಸಿಎಂ ಸಿದ್ದರಾಮಯ್ಯ ಅವರ ಚಿಂತನೆ. ಇತ್ತೀಚೆಗೆ ಬೆಳಗಾವಿಯಲ್ಲಿಯೂ ಆ ಕುರಿತು ಪ್ರಸ್ತಾಪ ಮಾಡಿದ್ದಾರೆ. ಹೀಗಾಗಿ ಅವರ ಮೂಲಕ ಜಿಲ್ಲೆಯ ಜನರ ಹೋರಾಟಕ್ಕೆ ಬೆಲೆ ಸಿಗಲಿದೆ ಎಂಬ ವಿಶ್ವಾಸವಿದೆ. ಆದ್ದರಿಂದ ಸ್ವಲ್ಪದಿನ ಹೋರಾಟ ಸ್ಥಗಿತೊಳಿಸಿ. ಸರ್ಕಾರದ ಮೇಲೆ ವಿಶ್ವಾಸ ಇಡಿ. ಕ್ಯಾಬಿನೆಟ್ ಮೀಟಿಂಗ್‌ವರೆಗೆ ಕಾಯಿರಿ. ಜಿಲ್ಲಾಡಳಿತ ಮತ್ತು ಸರ್ಕಾರ ಕೂಡ ಸ್ಪಂದಿಸಲಿದೆ. ಸರ್ಕಾರದಿಂದ ಸ್ಪಂದನೆ ಸಿಗದೇ ಹೋದರೆ ಮತ್ತೆ ಹೋರಾಟ ಮಾಡಲು ಅಡ್ಡಿಯಿಲ್ಲ ಎಂದು ಧರಣಿನಿರತರ ಮನವೊಲಿಸುವ ಪ್ರಯತ್ನ ಮಾಡಿದರು.

ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ 19 ದಿನಗಳಿಂದ ನಡೆಯುತ್ತಿರುವುದು ಸಾಮಾನ್ಯವೇನಲ್ಲ. ಈ ಹೋರಾಟ ಜನಜಾಗೃತಿ ಮೂಡಿಸಿದೆ. ಇಂಥ ಹೋರಾಟಗಳಿಗೆ ಸ್ಪಂದಿಸಬೇಕಾಗಿರುವುದು ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ. ಯಾರಿಗಾಗಿ? ಯಾಕೆ ಹೋರಾಟ ನಡೆದಿದೆ ಎಂಬ ಚಿಂತನೆ ಎಲ್ಲರಲ್ಲೂ ಬರಬೇಕು. ಜನಸಾಮಾನ್ಯರ ಕಳಕಳಿ ಇರುವವರು, ಪ್ರಜ್ಞಾವಂತರು ಹೋರಾಟಕ್ಕೆ ಜೊತೆಯಾಗುವರು. ಪ್ರತಿಯೊಬ್ಬ ನಾಗರಿಕೆ ಈ ಹೋರಾಟದ ಜೊತೆ ಇರುತ್ತಾರೆಂದು ಭಾವಿಸುವೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಅಲ್ ಅಮೀನ್, ಬಿಎಲ್‌ಡಿಇಯಂಥ ಖಾಸಗಿ ವೈದ್ಯಕೀಯ ಕಾಲೇಜ್‌ಗಳಿವೆ. ಆದರೂ ಜಿಲ್ಲೆಯ ಜನ ಆರೋಗ್ಯ ಸೇವೆಗಳಿಗಾಗಿ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗಲಿ, ಮೀರಜ್ ಅವಲಂಬಿಸಿದ್ದಾರೆ. ಹೀಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜ್ ಆಗಬೇಕೆಂಬುದು ಎಲ್ಲರ ಆಶಯ. ಈ ಹೋರಾಟ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಆಗಬೇಕಿತ್ತು ಎಂದರು.

ಮುಖಂಡ ಅರವಿಂದ ಕುಲಕರ್ಣಿ ಮಾತನಾಡಿ, ಈ ಹೋರಾಟ ನ್ಯಾಯದ ಪರವಾಗಿದೆ. ಯಾವುದೇ ವ್ಯಕ್ತಿ, ಸಂಸ್ಥೆ ಅಥವಾ ಪಕ್ಷದ ಪರ ಮತ್ತು ವಿರೋಧ ಅಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜ್‌ಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ಯಾವುದೇ ತ್ಯಾಗಕ್ಕೂ ಸಿದ್ಧ ಎಂದರು.

ಮುಖಂಡ ಎಸ್.ಎಂ. ಪಾಟೀಲ ಗಣಿಹಾರ, ಹೋರಾಟ ಸಮಿತಿಯ ಪ್ರಮುಖರಾದ ಸಿದ್ಧಲಿಂಗ ಬಾಗೇವಾಡಿ, ಅನೀಲ ಹೊಸಮನಿ, ಮಲ್ಲಿಕಾರ್ಜುನ ಕೆಂಗನಾಳ, ಮಲ್ಲಿಕಾರ್ಜುನ ಎಚ್.ಟಿ, ಲಲಿತಾ ಬಿಜ್ಜರಗಿ, ವಿದ್ಯಾವತಿ ಅಂಕಲಗಿ, ಕೆ.ಎಫ್. ಅಂಕಲಗಿ, ಅಕ್ರಂ ಮಾಶ್ಯಾಳಕರ, ಶ್ರೀನಾಥ ಪೂಜಾರಿ, ಸುರೇಶ ಬಿಜಾಪುರ, ಸುರೇಶ ಜೀಬಿ, ಡಾ.ಎಂ.ಆರ್. ಗುರಿಕಾರ, ಗೀತಾ ಎಚ್, ನಿಂಗರಾಜ ಬಿದರಕುಂದಿ, ಲಗಮನಗೌಡ ಪಾಟೀಲ, ಕಲ್ಲಪ್ಪ ಬಬಲಾದ, ನೀಲಾಂಬಿಕಾ ಬಿರಾದಾರ, ಸುಶೀಲಾ ಮಿಣಜಗಿ, ಮಲ್ಲಪ್ಪ ಬಿರಾದಾರ (ಬಬಲಾದ), ಅಕ್ಷಯಕುಮಾರ ಅಜಮನಿ, ಸಿದ್ರಾಮಯ್ಯ ಹಿರೇಮಠ ಮತ್ತಿತರರಿದ್ದರು. ಬಳಿಕ ಹೋರಾಟಗಾರರು ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net