ಗ್ರಾಪಂ ನೌಕರರ ಹೋರಾಟಕ್ಕೆ ಬೆಂಬಲ

manjunath
ಮಂಜುನಾಥ ಪಿ.ಶೆಟ್ಟಿ
Published on

ಪಡುಬಿದ್ರಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು, ಗ್ರಾಪಂ ಸಮಸ್ತ ನೌಕರರು ಕಾರ್ಯನಿರ್ವಹಣೆಯಲ್ಲಿ ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವಂತೆ ಹಾಗೂ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮತ್ತು ವಿವಿಧ ಭೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಗಳು ಹಾಗೂ ನೌಕರರ ಎಲ್ಲ ವೃಂದ ಸಂಘಗಳು ಮತ್ತು ರಾಜ್ಯ ಗ್ರಾಪಂ ಸದಸ್ಯರ ಮಹಾ ಒಕ್ಕೂಟ ನೇತೃತ್ವದಲ್ಲಿ ಅ.4ರಿಂದ 11ರ ವರೆಗೆ ರಾಜ್ಯಾದ್ಯಂತ ಗ್ರಾಪಂ ಸೇವೆ ನಿಲ್ಲಿಸಿ ಅನಿರ್ದಿಷ್ಟಾವಧಿ ನಡೆಸುವ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಎಲ್ಲ ಗ್ರಾಪಂಗಳು ಭಾಗಿಯಾಗಲಿವೆ ಎಂದು ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ಮಂಜುನಾಥ ಪಿ.ಶೆಟ್ಟಿ ಹೇಳಿದರು.

ಸಮಸ್ಯೆ ಬಗ್ಗೆ ಸರ್ಕಾರ ಮತ್ತು ಇಲಾಖೆಗೆ ಹಲವಾರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಯಾವುದೇ ಮನವಿಗೆ ಸ್ಪಂದಿಸದೆ, ಸಮಸ್ಯೆಗಳಿಗೂ ಪಂಚಾಯಿತಿ ಅಧಿಕಾರಿಗಳು ಮತ್ತು ನೌಕರರನ್ನು ನೇರ ಹೊಣೆ ಮಾಡಲಾಗುತ್ತಿದೆ. ಗ್ರಾಪಂಯಲ್ಲಿ ಜನರಿಂದ ಚುನಾಯಿತರಾದ ಆಡಳಿತ ಮಂಡಳಿ ಇದ್ದು ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಗ್ರಾಮ ಸರ್ಕಾರ ನಡೆಸುವ ಎಲ್ಲ ಅಧಿಕಾರಗಳನ್ನು ಹೊಂದಿದ್ದರೂ, ಅತಿಯಾದ ಸರ್ಕಾರಿ ಆದೇಶಗಳು, ಇಲಾಖಾ ಆದೇಶಗಳ ಮುಖಾಂತರವೇ ಕೆಲಸ ನಿರ್ವಹಿಸಬೇಕಾಗಿದೆ. ಅನುದಾನಗಳನ್ನು ಆದೇಶ, ಸುತ್ತೋಲೆ ಮತ್ತು ಮಾರ್ಗದರ್ಶಿ ಸೂತ್ರಗಳ ಮೇರೆಗೆ ಮಾತ್ರ ಬಳಸಬೇಕಾಗಿರುವುದರಿಂದ ಸ್ಥಳೀಯ ಜನಪ್ರತಿನಿಧಿಗಳು ಯಾವುದೇ ಅಧಿಕಾರವಿಲ್ಲದೆ ನೆಪ ಮಾತ್ರಕ್ಕೆ ಆಡಳಿತ ನಡೆಸುವಂತೆ ಆಗಿದೆ. ಇಲಾಖೆ ಅಧಿಕಾರಿಗಳ ಅವೈಜ್ಞಾನಿಕ ಮತ್ತು ಕಾನೂನುಬಾಹಿರ ಆದೇಶ ಮತ್ತು ಸುತ್ತೋಲೆಗಳಿಂದ ಅಧಿಕಾರದ ವಿಕೇಂದ್ರೀಕರಣದ ಬದಲಾಗಿ ಅಧಿಕಾರ ಕೇಂದ್ರೀಕರಣವಾಗುತ್ತಿರುವ ವಿರುದ್ಧ ಗ್ರಾಪಂ ಸದಸ್ಯರ ಮಹಾ ಒಕ್ಕೂಟದಿಂದ ರಾಜ್ಯದ ಎಲ್ಲ ಗ್ರಾಪಂಸದಸ್ಯರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net