

ವಿಜಯವಾಣಿ ಸುದ್ದಿಜಾಲ ತುಮಕೂರು
ಆರ್.ಜಿ.ಕರ್ ಸರ್ಕಾರಿ ವೈದ್ಯಕಿಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ದೇಶಾದ್ಯಂತ ಕಿರಿಯ ವೈದ್ಯರ ಆಮರಣಾಂತ ಉಪವಾಸಕ್ಕೆ ಮಂಗಳವಾರ ತುಮಕೂರಿನಲ್ಲು ಬೆಂಬಲಿಸಿ ಸತ್ಯಾಗ್ರಹ ನಡೆಸಲಾಯಿತು.
ಕೋಲ್ಕತ್ತಾದಲ್ಲಿ ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ಮಂಗಳವಾರ 11ನೇ ದಿನ ಪೂರ್ಣಗೊಳಿಸಿದ್ದು, ದೇಶಾದ್ಯಂತ ಈ ಹೋರಾಟ ಬೆಂಬಲಿಸಿ ಭಾರತೀಯ ವೈದ್ಯಕಿಯ ಸಂ ಜಿಲ್ಲಾ ಶಾಖೆ ನೇತೃತ್ವದಲ್ಲಿ ಸಿದ್ಧಾರ್ಥ, ಸಿದ್ಧಗಂಗಾ, ಶ್ರೀದೇವಿ ವೈದ್ಯಕಿಯ ಕಾಲೇಜುಗಳ ವಿದ್ಯಾರ್ಥಿಗಳು, ಸಿಬ್ಬಂದಿ, ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಏಕದಿನ ಉಪನ್ಯಾಸ ಸತ್ಯಾಗ್ರಹ ಹೋರಾಟ ನಡೆಸಿ, ನ್ಯಾಯಕ್ಕಾಗಿ ಒತ್ತಾಯಿಸಿದರು.
ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆಗೈದಿರುವ ಪ್ರಕರಣ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಉಗ್ರಕ್ರಮ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ಕೋಲ್ಕತ್ತಾದಲ್ಲಿ ಆರಂಭಿಸಿರುವ ಉಪವಾಸ ಸತ್ಯಾಗ್ರಹ 11 ದಿನ ಪೂರ್ಣಗೊಳಿಸಿದ್ದು, ಅಲ್ಲಿನ ರಾಜ್ಯ ಸರ್ಕಾರ ಸತ್ಯಾಗ್ರಹ ಹೋರಾಟಕ್ಕೆ ಮಣಿಯುವಂತೆ ಕಾಣುತ್ತಿಲ್ಲ. ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಎಸ್.ಭೂಷಣ್ ದೂರಿದರು. ಕೋಲ್ಕತ್ತಾ ವೈದ್ಯ ವಿದ್ಯಾರ್ಥಿನಿ ಹತ್ಯೆ ಪ್ರಕರಣ ಬೆಚ್ಚಿ ಬೀಳುಸುವಂತಿದ್ದು, ಇಂತಹ ಸನ್ನಿವೇಶದಲ್ಲಿ ವೈದ್ಯಕಿಯ ಸಿಬ್ಬಂದಿ ಆರೋಗ್ಯ ಸೇವೆ ಒದಗಿಸುವುದು ಕಷ್ಟವಾಗಲಿದೆ. ಸರ್ಕಾರಿ, ಖಾಸಗಿ ವೈದ್ಯಕಿಯ ಕಾಲೇಜು ಆಸ್ಪತ್ರೆ, ಖಾಸಗಿ ಆಸ್ಪತ್ರೆ, ಕ್ಲಿನಿಕ್ಗಳಲ್ಲಿ ಸೇವೆ ಸಲ್ಲಿಸುವ ಆರೋಗ್ಯ ಸಿಬ್ಬಂದಿಯ ರಕ್ಷಣೆಗೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮವಹಿಸುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.
ಮುಖ್ಯಮಂತ್ರಿಗೆ ಮನವಿ
ಕೋಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕಿಯ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಪ್ರಕರಣದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಕಿರಿಯ ವೈದ್ಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಜಿಲ್ಲೆಯಲ್ಲು ವೈದ್ಯಕಿಯ ಸಿಬ್ಬಂದಿ ಸತ್ಯಾಗ್ರಹ ಹೋರಾಟ ಮಾಡಿದ್ದು, ಆರೋಗ್ಯ ಸಿಬ್ಬಂದಿ ಜೀವಭಯದಿಂದ ಕರ್ತವ್ಯ ನಿರ್ವಹಿಸಬೇಕಿರುವ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ಒದಗಿಸುವ, ನಿರ್ಭೀತಿಯಿಂದ ರೋಗಿಗಳ ಸೇವೆಗೆ ವಾತಾವರಣ ಕಲ್ಪಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿಯನ್ನು ಜಿಲ್ಲಾಧಿಕಾರಿ ಶುಭಕಲ್ಯಾಣ್ ಮೂಲಕ ಐಎಂಎ ಜಿಲ್ಲಾಶಾಖೆ ನಿಯೋಗವು ಸಲ್ಲಿಸಿದೆ. ನಿಯೋಗದಲ್ಲಿ ಜಿಲ್ಲಾಧ್ಯಕ್ಷ ಡಾ.ಕೆ.ಪಿ.ಎಸ್.ಭೂಷಣ್, ಮಾಜಿ ಜಿಲ್ಲಾಧ್ಯಕ್ಷ ಡಾ.ಎಚ್.ವಿ.ರಂಗಸ್ವಾಮಿ, ಕಾರ್ಯದರ್ಶಿ ಡಾ.ಪ್ರದಿಪ್ ಪ್ರಭಾಕರ್, ಡಾ.ಜೆ.ಬಿ.ನಿಜಗಲ್ಮಠ್, ಡಾ.ಗಿರಿಜಾ, ಡಾ.ರಾಜೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.