

ಅಣ್ಣಿಗೇರಿ: ವಿವಿಧ ಬೇಡಿಕೆ ಈಡೇರಿಕೆಗಾಗಿ ಆರಂಭಿಸಿರುವ ಭಾರತ ಯಾತ್ರೆಗೆ ಶಿಕ್ಷಕರಿಂದ ಅಭೂತಪೂರ್ವ ಬೆಂಬಲ ದೊರಕಿದೆ. ಇದೇ ರೀತಿ ಮುಂದಿನ ದಿನಮಾನಗಳಲ್ಲಿ ತಮ್ಮ ಬೆಂಬಲ ಹೋರಾಟಕ್ಕೆ ನೀಡಬೇಕು ಎಂದು ಬಸವರಾಜ ಗುರಿಕಾರ ಹೇಳಿದರು.
ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ಭಾರತ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎನ್ಪಿಎಸ್ ರದ್ದು ಮಾಡಿ ಒಪಿಎಸ್ ಜಾರಿಗೆ ತರಲು ನಡೆಯುತ್ತಿರುವ ನಮ್ಮ ಹೋರಾಟ ಸಂಘಟನೆ ಮೂಲಕ ಪ್ರಬುದ್ಧವಾಗಿ ಜರುಗುತ್ತಿದೆ. ಅಕ್ಟೋಬರ್ 5ರಂದು ದೆಹಲಿಯಲ್ಲಿ ಈ ಯಾತ್ರೆ ಮುಕ್ತಾಯಗೊಳ್ಳಲಿದ್ದು, ಅಲ್ಲಿ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ವಿ.ಎಂ. ಹಿರೇಮಠ, ಎ.ಬಿ. ಕೊಪ್ಪದ, ಶೇಖರ ಮುಗಳಿ, ಹನಮಂತಪ್ಪ ಚುಳುಕಿ, ಇತರರಿದ್ದರು. ಮಹಾಂತೇಶ ವಸ್ತ್ರದ ಕಾರ್ಯಕ್ರಮ ನಿರ್ವಹಿಸಿದರು. ಇದಕ್ಕೂ ಮೊದಲು ಪಟ್ಟಣದ ಅಂಬಿಗೇರಿ ಕ್ರಾಸ್ದಿಂದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯವರೆಗೆ ಮೆರವಣಿಗೆ ನಡೆಯಿತು.