

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ವಸತಿ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಆಯೋಜಿಸಿದ್ದ ಬೆಂಗಳೂರು ರಿಯಲ್ಟರ್ಸ್ ಅಸೋಸಿಯೇಷನ್ ಇಂಡಿಯಾದ (ಬಿಆರ್‌ಎಐ) ಬೆಳ್ಳಿಹಬ್ಬದ ಸಮಾರಂಭದಲ್ಲಿ ಸಾಧಕ ಉದ್ದಿಮೆದಾರರಿಗೆ ಪ್ರಶಸ್ತಿ ನೀಡಿ ಅವರು ಮಾತನಾಡಿದರು.
ಬೆಂಗಳೂರು ರಿಯಲ್ ಎಸ್ಟೇಟ್ ಕ್ಷೇತ್ರ ಎತ್ತರಕ್ಕೆ ಏರಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಮತ್ತೆ ಚೇತರಿಕೆಯತ್ತ ಸಾಗಿರುವ ಈ ಉದ್ಯಮದ ಬೆಳವಣಿಗೆ ಸರ್ಕಾರ ಅಗತ್ಯ ಸಹಕಾರ ನೀಡಲಿದೆ. ಬಡವರು ಹಾಗೂ ಮಧ್ಯಮ ವರ್ಗಕ್ಕೆ ಕೈಕೆಟಕುವ ದರದಲ್ಲಿ ವಸತಿ ಸೌಲಭ್ಯವನ್ನು ಒದಗಿಸುವತ್ತ ಮುತುವರ್ಜಿ ವಹಿಸಬೇಕು ಎಂದು ಡಿಸಿಎಂ ಮನವಿ ಮಾಡಿದರು.
ಕ್ರೆಡೈ ಬೆಂಗಳೂರು ವಿಭಾಗದ ಮಾಜಿ ಅಧ್ಯಕ್ಷ ಇರ್ಫಾನ್ ರಜಾಕ್ ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಪೂರ್ವದಲ್ಲಿ ಪ್ರತಿ ತ್ರೈಮಾಸಿಕ ಮಾರಾಟವು ಅಂದಾಜು 10,000 ಕೋಟಿ ರೂ. ಆಸುಪಾಸಿನಲ್ಲಿತ್ತು. ಕೋವಿಡ್ ನಂತರ ಚೇತರಿಕೆಯ ಹಾದಿ ಹಿಡಿದಿದ್ದು, ಮುಂಬರುವ ತ್ರೈಮಾಸಿಕಗಳಲ್ಲಿ 20,000 ಕೋಟಿ ರೂ. ವಹಿವಾಟು ದಾಟುವ ನಿರೀಕ್ಷೆ ಇದೆ. ಅದರಲ್ಲೂ ವಸತಿ ವಿಭಾಗವು ಹಿಂದಿಗಿಂತ ಶೇ.50 ಬೆಳವಣಿಗೆಯನ್ನು ಕಂಡಿದೆ ಎಂದರು.
ಇದೇ ವೇಳೆ 22 ಮಂದಿ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕರಾದ ಎನ್.ಎ. ಹ್ಯಾರಿಸ್, ನಸೀರ್ ಅಹಮದ್, ಮಾಜಿ ಸಚಿವ ರೋಶನ್ ಬೇಗ್, ಬಿಡಿಎ ಆಯುಕ್ತ ಎನ್.ಜಯರಾಮ್, ಕರ್ನಾಟಕ ರೇರಾ ಅಧ್ಯಕ್ಷ ಎಚ್.ಸಿ. ಕಿಶೋರ್‌ಚಂದ್ರ, ಉದ್ಯಮ ಕ್ಷೇತ್ರದ ಪ್ರಮುಖರಾದ ಸಿ.ಎನ್. ಗೋವಿಂದರಾಜು, ರಮಣಿ ಶಾಸ್ತ್ರಿ, ಜಿತು ವಿರ್ವಾನಿ, ಹಾಗೂ ಇತರರಿದ್ದರು.