ಸೋಮವಾರಪೇಟೆ : ಸಿ ಆ್ಯಂಡ್ ಡಿ ಕೃಷಿ ಭೂಮಿಗೆ ಹಕ್ಕುಪತ್ರಕ್ಕೆ ಆಗ್ರಹಿಸಿ ಡಿ.20ರಂದು ಮಡಿಕೇರಿಯಲ್ಲಿ ನಡೆಯುವ ರೈತರ ಸಮಾವೇಶಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹಾಗು ಜಿಲ್ಲಾ ಪ್ರತಿನಿಧಿ ಹರಪಳ್ಳಿ ರವೀಂದ್ರ ಹೇಳಿದರು.
ನಾನೊಬ್ಬ ರೈತನಾಗಿ ಸಿ ಆ್ಯಂಡ್ ಡಿ ಭೂಮಿಯ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಬೆಂಗಳೂರಿನಲ್ಲಿ ಅರಣ್ಯ, ಕಂದಾಯ ಮಂತ್ರಿಗಳನ್ನು ರೈತರ ನಿಯೋಗದೊಂದಿಗೆ ಭೇಟಿಯಾಗಿ ರೈತರ ಸಂಕಷ್ಟಗಳನ್ನು ಹೇಳಿದ್ದೇವೆ. ರೈತರ ಪರವಾಗಿ ರಾಜ್ಯ ಸರ್ಕಾರ ನಿಲ್ಲಬೇಕೆಂದು ಕೇಳಿಕೊಂಡಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೃಷಿ ಭೂಮಿಯನ್ನೇ ಸಿ ಆ್ಯಂಡ್ ಡಿ (ಕೃಷಿ ಯೋಗ್ಯವಲ್ಲದ ಭೂಮಿ) ಎಂದು ಗುರುತಿಸಲಾಗಿದೆ. ಹಿಂದೆ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ಮಾಡಿದ ತಪ್ಪಿಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹುತೇಕ ಜನ ನಾಲ್ಕೈದು ದಶಕಗಳಿಂದ ಮುರ‌್ನಾಲ್ಕು ಎಕರೆ ಜಾಗದಲ್ಲಿ ಕೃಷಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಈಗ ಆ ಭೂಮಿಯನ್ನು ತೆರವುಗೊಳಿಸಿ ಅರಣ್ಯ ಮಾಡಿದರೆ, ರೈತರು ಬೀದಿ ಪಾಲಾಗಬೇಕಾಗುತ್ತದೆ ಎಂದರು.
ಸಿ ಆ್ಯಂಡ್ ಡಿ ಜಾಗದ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿದ್ದು, ರಾಜ್ಯ ಸರ್ಕಾರ ರೈತರ ಪರವಾಗಿ ಅಫಿಡೆವಿಟ್ ಸಲ್ಲಿಸುವುದಕ್ಕೆ ಅವಕಾಶವಿದೆ. ಸಮಸ್ಯೆಯನ್ನು ಬಗೆಹರಿಸುವ ಅವಕಾಶವಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ರೈತರಾದ ಪ್ರಣಿತ್, ಬಸಪ್ಪ ಇದ್ದರು.