

ನರಗುಂದ: ಪಟ್ಟಣದ ಹೊರವಲಯದಲ್ಲಿರುವ ಕುರ್ಲಗೇರಿ ರಸ್ತೆ ಭಾಗದ ಡಾಲರ್ಸ್ ಕಾಲನಿ ಹಾಗೂ ರಾಣಿ ಚನ್ನಮ್ಮ ಬಡಾವಣೆಗೆ ಕಳೆದ ಮೂರು ತಿಂಗಳಿಂದ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಕುಡಿಯುವ ನೀರಿಗಾಗಿ ಸಾರ್ವಜನಿಕರು ತೊಂದರೆಪಡುವಂತಾಗಿದೆ. ಕೂಡಲೇ ಪುರಸಭೆ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಸೋಮವಾರ ಪ್ರತಿಭಟನೆ ಜಾಥಾ ಮೂಲಕ ಪುರಸಭೆಗೆ ತೆರಳಿ ಪುರಸಭೆ ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಸಿಬ್ಬಂದಿ ಸಿದ್ದು ಕಿಲಾರಿ ಅವರಿಗೆ ಮನವಿ ಸಲ್ಲಿಸಿದರು.
ನರಗುಂದ ಹೊರವಲಯದ ವಿವಿಧ ಬಡಾವಣೆಗಳಲ್ಲಿ ಅನೇಕ ನಿವಾಸಿಗಳು ವಾಸವಾಗಿದ್ದಾರೆ. ಅವರಿಗೆ ಕುಡಿಯುವ ನೀರಿನ ತೊಂದರೆಯಾಗುತ್ತಿದೆ. ದೂರದ ಸ್ಥಳದಿಂದ ಬಾಡಿಗೆ ಆಧಾರದಲ್ಲಿ ನೀರು ಪಡೆಯುವಂತಹ ಸ್ಥಿತಿ ಇದೆ. ಸಮರ್ಪಕ ನೀರು ಪೂರೈಕೆ ಮಾಡದಿದ್ದರೆ ಉಗ್ರ ರೀತಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೇಣವ್ವ ಮುಧೋಳ, ಪುಷ್ಟಾ ಹಡಪದ, ಯಶೋಧಾ ಕೊಣ್ಣೂರ, ಶಿವಪ್ಪ ಚನ್ನಪ್ಪನವರ, ರಮೇಶ ನಾಯ್ಕರ್, ಭರಮಪ್ಪ ಗಡ್ಡಿ, ಹನುಮಂತ ಲಮಾಣಿ ಇನ್ನಿತರರು ಇದ್ದರು.