

ಚಿಕ್ಕಮಗಳೂರು: ಕೊಳವೆಬಾವಿ ಹಾಗೂ ಗುರುತ್ವಾಕರ್ಷಣೆ ಮೂಲಕ ನೀರು ಒದಗಿಸುವ ವ್ಯವಸ್ಥೆಗಳು ಇಲ್ಲದಿದ್ದಲ್ಲಿ ಅಂತಹ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು ಎಂದು ಶಾಸಕ ಸಿ.ಟಿ.ರವಿ ಅಧಿಕಾರಿಗಳಿಗೆ ಸೂಚಿಸಿದರು. ನಗರದ ತಾಪಂ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ನದಿಯಿಂದ ನೀರು ಒದಗಿಸುವ ಸಮಗ್ರ ಯೋಜನೆ ಆರಂಭವಾದರೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭ್ಯವಾಗುತ್ತದೆ. ಆದ್ದರಿಂದ ತಾತ್ಕಾಲಿಕ ಮಾರ್ಗಗಳನ್ನು ಅನುಸರಿಸಿ ಕುಡಿಯುವ ನೀರು ಒದಗಿಸಬೇಕು ಎಂದರು.
ನೀರು ಸರಬರಾಜು ವ್ಯತ್ಯಯವಾಗದಿರಲಿ:
ತಾಲೂಕಿನ ಲಕ್ಯಾ ಮತ್ತು ಸಖರಾಯಪಟ್ಟಣ ಹೋಬಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ಸಮಸ್ಯೆಯಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ವಿಧಾನಸಭಾ ಕ್ಷೇತ್ರದ ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಗ್ರಾಮಗಳ ವ್ಯಾಪ್ತಿಯಲ್ಲಿ ಜೂನ್ ಅಂತ್ಯದವರೆಗೆ ಕುಡಿಯುವ ನೀರಿಗಾಗಿ ವಿಶೇಷ ಗಮನ ಹರಿಸಬೇಕು. ನೀರಿನ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಪಿಡಿಒ, ಅಧ್ಯಕ್ಷರು ಮತ್ತು ಸದಸ್ಯರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ಪ್ರತ್ಯೇಕ ಟಿ.ಸಿ. ಅಳವಡಿಸಿ:
ಗ್ರಾಪಂ ಮಟ್ಟದಲ್ಲಿ ಕುಡಿಯುವ ನೀರು ಒದಗಿಸಲು ವಿದ್ಯುತ್ ಸಂಪರ್ಕ ಅಗತ್ಯ. ವಿದ್ಯುತ್ ವ್ಯತ್ಯಯವಾಗದಂತೆ ನೀಡಬೇಕು. ನೀರು ಅಗತ್ಯವಿರುವ ಪ್ರದೇಶಗಳಲ್ಲಿ ಪ್ರತ್ಯೇಕ ಟಿಸಿ ವ್ಯವಸ್ಥೆ ಕಲ್ಪಿಸಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಕೇಂದ್ರ ಸರ್ಕಾರದ ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಠಾನಗೊಳಿಸಲು ಗ್ರಾಮಸ್ಥರಿಂದ ಸಮಸ್ಯೆಗಳಿದ್ದಲ್ಲಿ ಕಾನೂನಿನ ಮೂಲಕ ಕಾರ್ಯಗತಗೊಳಿಸಬೇಕು. ರಸ್ತೆಗಳನ್ನು ನಿರ್ಮಿಸುವ ಸ್ಥಳಗಳಲ್ಲಿ ಗ್ರಾಪಂಗೆ ಒಳಪಟ್ಟ ಕೊಳವೆಬಾವಿಗಳಿದ್ದರೆ ಅವುಗಳನ್ನು ಬೇರೆಡೆಗೆ ವರ್ಗಾಯಿಸುವುದು ಅವರ ಕೆಲಸ. ಅಂತಹ ಸ್ಥಳಗಳಿದ್ದಲ್ಲಿ ಅರ್ಜಿ ಸಲ್ಲಿಸಿ ಎಂದರು. ಜಿಪಂ ಸದಸ್ಯ ರವೀಂದ್ರ ಬೆಳವಾಡಿ, ಜಿ.ಎನ್.ವಿಜಯ್‍ಕುಮಾರ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೇಶ್, ಉಪಾಧ್ಯಕ್ಷೆ ಶಾರದಾ ಶಶಿಧರ್, ಸದಸ್ಯೆ ರೇಖಾ ಅನಿಲ್‍ಕುಮಾರ್, ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಕೆ.ತಾರಾನಾಥ್, ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್, ಎಇಇ ಜಯಪ್ರಕಾಶ್ ಇತರರಿದ್ದರು.