

ಕಮತಗಿ: ಪಟ್ಟಣದಲ್ಲಿನ ಕೆಎಚ್ಡಿಸಿ ನೇಕಾರರಿಗೆ ಬಿಮು ಹಾಗೂ ಕಚ್ಚಾ ಸಾಮಗ್ರಿ ಪೂರೈಕೆಯನ್ನು ಏಕಾಏಕಿ ಬಂದ್ ಮಾಡಿರುವುದನ್ನು ಖಂಡಿಸಿ ನೇಕಾರರು ಕೆಎಚ್ಡಿಸಿ ಕಚೇರಿ ಮುಂದೆ ಶುಕ್ರವಾರ ದಿಢೀರ್ ಪ್ರತಿಭಟನೆ ನಡೆಸಿದರು.
ನೇಕಾರ ಟಾಕಪ್ಪ ಕಾಳಗಿ ಮಾತನಾಡಿ, ಪಟ್ಟಣದಲ್ಲಿ ಕಳೆದ 30 ವರ್ಷಗಳಿಂದ 100ಕ್ಕೂ ಅಧಿಕ ನೇಕಾರರು ಕೆಎಚ್ಡಿಸಿಯಿಂದ ಬಂದ ಹಣದಲ್ಲಿಯೇ ಕುಟುಂಬದ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಕೆಎಚ್ಡಿಸಿ ಅಧಿಕಾರಿಗಳು ಏಕಾಏಕಿ ಕಚ್ಚಾ ಸಾಮಗ್ರಿಯನ್ನು ಇನ್ನು ಮುಂದೆ ಪೂರೈಕೆ ಮಾಡಲ್ಲ ಎಂದಿದ್ದಾರೆ. ಅದಕ್ಕೆ ಕಾರಣ ಕೇಳಿದರೆ ಕಮತಗಿ ಕೆಎಚ್ಡಿಸಿ ಉಪಕೇಂದ್ರದ ಮೇಲ್ವಿಚಾರಕ ಮಹಾಂತೇಶ ಬೆಣ್ಣೂರ ಅವರು ಈ ಕುರಿತು ಮೇಲಧಿಕಾರಿಗಳಿಂದ ಮೌಖಿಕವಾಗಿ ಆದೇಶ ಬಂದಿದೆ ಎಂದು ತಿಳಿಸಿದ್ದರಿಂದ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.
ಸ್ಥಳಕ್ಕೆ ಕೆಎಚ್ಡಿಸಿ ಇಳಕಲ್ಲ ವಿಭಾಗದ ಯೋಜನಾಧಿಕಾರಿ ಎನ್.ಬಿ.ಪಾಟೀಲ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಕೆಎಚ್ಡಿಸಿ ನಿಗಮದ ವತಿಯಿಂದ ಪಡೆದುಕೊಳ್ಳುತ್ತಿದ್ದ ಬಟ್ಟೆಯ ಖರೀದಿಯನ್ನು ರಾಜ್ಯ ಸರ್ಕಾರ ಸ್ಥಗಿತಗೊಳಿಸಿದೆ. ಅವರ ಆದೇಶದಂತೆ ಮೌಖಿಕವಾಗಿ ತಿಳಿಸಲಾಗಿದೆ. ಮೇಲಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿ ಮತ್ತೆ ಕಚ್ಚಾ ಸಾಮಗ್ರಿ ಪೂರೈಸುವಂತೆ ಕ್ರಮ ಕೈಗೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದಕ್ಕೆ ಪ್ರತಿಭಟನಾನಿರತರು ಪ್ರತಿಕ್ರಿಯಿಸಿ, ಒಂದು ವಾರದೊಳಗೆ ಸಮಸ್ಯೆ ಪರಿಹರಿಸದಿದ್ದರೆ ಮತ್ತೆ ಕೆಎಚ್ಡಿಸಿ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನೇಕಾರರಾದ ಪಾರತವ್ವ ಬುಳ್ಳಾ, ಮಾನಕ್ಕ ಮಾನುಟಗಿ, ಟೋಪನ್ನ ಕಾಳಗಿ, ಸಾವಿತ್ರಿ ಅಚನೂರ, ನಾಗಪ್ಪ ಅಚನೂರ, ಲಕ್ಷ್ಮೀ ವಡವಡಗಿ, ದಾನಮ್ಮ ಮೇಲಗಿರಿ, ಶಂಕ್ರವ್ವ ನಿಡಗುಂದಿ, ಶಾಂತವ್ವ ಅಚನೂರ ಇತರರಿದ್ದರು.