

ಕೆ.ಎಂ.ದೊಡ್ಡಿ: ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಮನ್‌ಮುಲ್ ಹೆಸರು ವಿಶ್ವದಲ್ಲಿ ರಾರಾಜಿಸಲು ಸಹಕರಿಸಿ ಎಂದು ಮನ್‌ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ ತಿಳಿಸಿದರು.
ಸಮೀಪದ ಕೆ.ಪಿ.ದೊಡ್ಡಿಯಲ್ಲಿ ಮಣಿಗೆರೆ ಹಾಲು ಉತ್ಪಾದಕರ ಸಹಕಾರ ಸಂಘದ ನೂತನವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ರೈತರು ಹೈನುಗಾರಿಕೆಯಲ್ಲಿ ಪ್ರಗತಿ ಸಾಧಿಸಲು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಮನ್‌ಮುಲ್ ಪ್ರಗತಿಗೆ ನೆರವಾಗಿ ಎಂದರು.
ಡೈರಿಗಳಿಗೆ ಕೆಟ್ಟ ಹೆಸರು ತರಲು ಕೆಲವು ಹೈನು ಉದ್ಯಮಿಗಳು ನೀರು ಮಿಶ್ರಿತ ಹಾಲು ಪೂರೈಕೆ ಮಾಡುತ್ತಿದ್ದು, ಅಂಥವರಿಗೆ ಕಡಿವಾಣ ಹಾಕಲು ಹಾಲಿನ ಗುಣಮಟ್ಟ ಕಂಡು ಹಿಡಿಯುವ ನೂತನ ಯಂತ್ರ ಅಳವಡಿಸಲಾಗುತ್ತದೆ ಎಂದರು. ಕಳೆದ ನಾಲ್ಕು ದಶಕಗಳ ಹಿಂದೆ ಆರಂಭವಾದ ಡೈರಿಯು ಉತ್ತಮವಾಗಿ ನಡೆದು ಕೊಂಡು ಬರುತ್ತಿದ್ದು ಪ್ರತಿ ದಿನ 600 ಲೀಟರ್ ಹಾಲು ಪೂರೈಕೆ ಮಾಡುವ ಮೂಲಕ ಉತ್ತಮ ವಹಿವಾಟು ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಗುಣಮಟ್ಟದ ಹಾಲು ಪೂರೈಕೆ ಮಾಡಿ ಎಂದು ರೈತರಿಗೆ ತಿಳಿಸಿದರು.
ನಾಮಫಲಕ ಅನಾವರಣ ಗೊಳಿಸಿದ ಮನ್‌ಮುಲ್ ನಿರ್ದೇಶಕ ಹರೀಶ್ ಬಾಬು ಮಾತನಾಡಿ, ಹಾಲಿನ ಡೈರಿ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಬೇಡಿ. ಮನ್ಮುಲ್‌ಗೆ ಗುಣಮಟ್ಟದ ಹಾಲು ಮಾತ್ರ ಬೇಕು ಕಲಬೆರಕೆ ಹಾಲು ನೀಡಿದರೇ ಯಾವುದೇ ಮುಲಾಜಿಲ್ಲದೆ ತಿರಸ್ಕರಿಸಲಾಗುವುದು ಎಂದರು.
ಹಾಲಿನ ಗುಣಮಟ್ಟ ಕಾಪಾಡಲು ಫ್ಯಾಟ್ ಅನುಗುಣವಾಗಿ ಹಾಲು ಉತ್ಪಾದಕರಿಗೆ ದರ ನಿಗದಿ ಪಡಿಸಲಾಗುತ್ತಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದ್ದು ಉತ್ತಮವಾಗಿ ಹಾಲು ಪೂರೈಕೆ ಮಾಡುವ ರೈತರಿಗೆ ಹೆಚ್ಚಿನ ಹಣ ದೊರೆಯಲಿದೆ. ಈ ನಿಟ್ಟಿನಲ್ಲಿ ರೈತರು ಗುಣಮಟ್ಟಕ್ಕೆ ಆದ್ಯತೆ ನೀಡಿ ಎಂದು ಕಿವಿ ಮಾತು ಹೇಳಿದರು.
ಮನ್‌ಮುಲ್ ತನ್ನ ಗುಣಮಟ್ಟವನ್ನು ಮತ್ತಷ್ಟು ಕಾಪಾಡಿ ಕೊಳ್ಳಲು, ಕಲಬೆರಕೆ ಹಾಲು ನಿಯಂತ್ರಣಕ್ಕೆ ಹಲವು ತಂತ್ರಗಳನ್ನು ರೂಪಿಸಲಾಗಿದೆ. ರೈತರಿಗೆ ತಿಳಿ ಹೇಳಲು ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಿದ್ದು ರೈತರು ಗುಣಮಟ್ಟದ ಹಾಲು ಪೂರೈಕೆ ಮಾಡಿದರೇ ಅವರಿಗೆ ಸಿಗುವ ಹಣದ ಬಗ್ಗೆ ಮಾಹಿತಿ ನೀಡುತ್ತಾರೆ ಎಂದರು.
ಮನ್‌ಮುಲ್ ನಿಂದ ಹೈನುಗಾರಿಕೆ ರೈತರಿಗೆ ಸಿಗುವಂತ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಲಾಗುತ್ತಿದ್ದು ರೈತರು ಅದನ್ನು ಸದುಪಯೋಗ ಪಡಿಸಿಕೊಂಡು ಗುಣಮಟ್ಟದ ಹಾಲು ಪೂರೈಕೆ ಮಾಡುವ ಮೂಲಕ ಒಕ್ಕೂಟ ಮತ್ತು ಸಂಸ್ಥೆಯನ್ನು ಉಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಡೈರಿ ವತಿಯಿಂದ ವೇಳೆ ಮನ್ಮುಲ್ ನಿರ್ದೇಶಕರಾದ ಎಸ್.ಪಿ. ಸ್ವಾಮಿ, ಹರೀಶ್‌ಬಾಬು ಹಾಗೂ ಸಂಘದ ಅಧ್ಯಕ್ಷ ಕೆಂಪರಾಜು, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಪುಟ್ಟಲಿಂಗಯ್ಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಿ.ಆರ್.ಮಂಜೇಶ್, ಸಹಾಯಕ ವ್ಯವಸ್ಥಾಪಕರಾದ ಡಾ.ಹೊನ್ನೇಶ್, ಹಣಮಂತ್ ತೋಳಮರ್ಡಿ, ವಿಸ್ತರಣಾಧಿಕಾರಿ ಎನ್.ಭವ್ಯಶ್ರೀ, ಗುತ್ತಿಗೆದಾರ ಜಗದೀಶ್ ತಿಮ್ಮೇಗೌಡ, ಸಿಇಓ ಕೆ.ಪುಟ್ಟಲಿಂಗಯ್ಯ, ಮುಖಂಡ ಮಣಿಗೆರೆ ರಾಮಣ್ಣ, ಯುವ ಮುಖಂಡ ಗೋಬಿ ಸಿದ್ದರಾಜು, ಸಂಘದ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಎಂ.ಎಲ್.ರಮೇಶ್, ಎಂ.ಕೆ. ವೆಂಕಟೇಶ್, ಕೆ.ಎನ್. ಸಿದ್ದೇಗೌಡ, ಬಸವೇಗೌಡ, ಕೆಂಪಮ್ಮ, ಸ್ವಾಮಿ, ಬಿಳಿಯಯ್ಯ,ಜೀವನ್ ಸೇರಿದಂತೆ ಇತರರಿದ್ದರು.