

ಗುಂಡ್ಲುಪೇಟೆ: ಗುಣಮಟ್ಟದ ಹಾಲಿಗೆ ಬೇಡಿಕೆಯಿದ್ದು, ಹೆಚ್ಚಾಗಿ ಉತ್ಪಾದನೆ ಮಾಡುವ ಮೂಲಕ ರೈತರು ಲಾಭ ಗಳಿಸಬೇಕು ಎಂದು ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್ ಸಲಹೆ ನೀಡಿದರು.
ತಾಲೂಕಿನ ರಂಗನಾಥಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಅಂತರ್ಜಲ ಸಮಸ್ಯೆ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಬಹುತೇಕ ರೈತರು ಜೀವನೋಪಾಯಕ್ಕೆ ಹೈನುಗಾರಿಕೆಯನ್ನು ಪ್ರಮುಖ ಕಸುಬಾಗಿ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಹಾಲು ಒಕ್ಕೂಟ ಆರಂಭಿಸಿದ್ದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದರು.
ಗುಣಮಟ್ಟದ ಹಾಲಿನಿಂದ ಗುಡ್ ಲೈಫ್ ಹಾಲು ಸೇರಿದಂತೆ ನಾನಾ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತಿದೆ. ಸದ್ಯ ಸಂಘವು ಈ ಸಾಲಿನಲ್ಲಿ 5 ಲಕ್ಷ ರೂ. ಲಾಭಗಳಿಸಿದ್ದು, 2.35ಲಕ್ಷ ರೂ.ಗಳನ್ನು ಬೋನಸ್ ರೂಪದಲ್ಲಿ ಉತ್ಪಾದಕರಿಗೆ ಹಂಚಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್, ಸಂಘದ ಅಧ್ಯಕ್ಷ ಸುಬ್ಬಮಾದಶೆಟ್ಟಿ, ಉಪಾಧ್ಯಕ್ಷ ಮುದ್ದಯ್ಯ, ನಿರ್ದೇಶಕರಾದ ಅಂಕಶೆಟ್ಟಿ, ದೊರೆಸ್ವಾಮಿ, ಶಂಕರ, ಮಹೇಶ್, ಮಾರ್ಗ ವಿಸ್ತರಣಾಧಿಕಾರಿ ರಂಜಿತಾ, ಮುಖ್ಯಕಾರ್ಯನಿರ್ವಾಹಕ ಪುಟ್ಟಸ್ವಾಮಿ ಹಲವರು ಇದ್ದರು.