ಗುಣಮಟ್ಟದ ಆಹಾರ ಧಾನ್ಯ ಪೂರೈಸಿ

SGN
Published on

ಶಿಗ್ಗಾಂವಿ: ಅನ್ನಭಾಗ್ಯ ಯೋಜನೆಯಡಿ ಪಡಿತರ ವಿತರಣೆ ವ್ಯವಸ್ಥೆ, ಕುಡಿಯುವ ನೀರು ಮತ್ತು ಜಾನುವಾರ ರಕ್ಷಣೆ ಹಾಗೂ ಶಾಲಾ ಮಕ್ಕಳಿಗೆ ಗುಣಮಟ್ಟದ ಆಹಾರ ಧಾನ್ಯ ಪೂರೈಕೆಯಲ್ಲಿ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಜಿಲ್ಲಾ ಜಂಟಿ ಕೃಷಿ ಉಪನಿರ್ದೇಶಕ, ತಾಪಂ ಆಡಳಿತ ಅಧಿಕಾರಿ ಜಿ. ಮಂಜುನಾಥ ಸೂಚಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ ವಿವಿಧ ಯೋಜನೆಗಳ ಅನುಮೋದನೆ ಹಾಗೂ ಅನುಷ್ಠಾನ ಕುರಿತು ಮಾಹಿತಿ ಪಡೆದರು. ಸಭೆಗೆ ಕೆಲವು ಇಲಾಖೆ ಅಧಿಕಾರಿಗಳು ಗೈರಾಗಿ ಸಹಾಯಕರನ್ನು ಮತ್ತು ಕಂಪ್ಯೂಟರ್ ಆಪರೇಟರ್‌ಗಳನ್ನು ಕಳುಹಿಸಿದ್ದಕ್ಕೆ ಗರಂ ಆದ ಆಡಳಿತಾಧಿಕಾರಿ, ಗೈರಾದ ಅಧಿಕಾರಿಗಳಿಗೆ ಇವತ್ತೇ ನೋಟಿಸ್ ಜಾರಿ ಮಾಡುವ ಮೂಲಕ ಅವರ ಮೇಲೆ ಕ್ರಮ ಕೈಗೊಂಡು, ಮುಂದಿನ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕೆಂದು ತಾಕೀತು ಮಾಡಿದರು.

ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿ ಮನೆ ಮನೆಗೆ ನೀರು ಪೂರೈಸಬೇಕು. ಪಡಿತರ ಚೀಟಿಗಳಿಗೆ ಬ್ಯಾಂಕ್ ಖಾತೆ ಜೋಡಣೆ, ಎನ್‌ಪಿಸಿಐ ಲಿಂಕ್, ಆಧಾರ್ ಹೊಂದಾಣಿಕೆ ಕುರಿತು ಸಾರ್ವಜನಿಕರಿಗೆ ತಿಳಿಸುವ ಮೂಲಕ ಅನ್ನ ಭಾಗ್ಯ ಯೋಜನೆಯ ಸಹಾಯಧನ ಸಮರ್ಪಕವಾಗಿ ತಲುಪಬೇಕು. ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಆಹಾರ ಧಾನ್ಯಗಳನ್ನು ಪೂರೈಸಿ, ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಪಶುಪಾಲನೆ ಪಶು ವೈದ್ಯ ಸೇವಾ ಇಲಾಖೆ, ಲೋಕೋಪಯೋಗಿ ಉಪವಿಭಾಗ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ, ಆಹಾರ ಮತ್ತು ಅಕ್ಷರ ದಾಸೋಹ ಯೋಜನೆ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಲಾಯಿತು.
ತಾಪಂ ಇಒ ಪಾಲಯ್ಯನಕೋಟೆ ವಿಶ್ವನಾಥ, ಯೋಜನಾ ಸಾಂಖಿಕ ಅಧಿಕಾರಿ ಶಿವಾನಂದ ಸಣ್ಣಕ್ಕಿ, ಪ್ರಕಾಶ ಆವೊಂಧಕರ, ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ರೈತರ ಜಮೀನಿಗೆ ಭೇಟಿ ನೀಡಿ

ಎನ್‌ಆರ್‌ಐಜಿ ಯೋಜನೆಯಡಿ ರೈತರ ಜಮೀನು ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ ರೈತರ ಕೃಷಿಗೆ ಸಂಬಂಧಿಸಿದ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈಗಾಗಲೇ ಕೆಲವೆಡೆ ಸೋಯಾಬೀನ್ ಬೆಳೆ ಕಟಾವಿಗಿ ಬಂದಿದ್ದು, ಅಧಿಕಾರಿಗಳು ರೈತರ ಜಮೀನಿಗೆ ತೆರಳಿ ಬೆಳೆಯ ಸರಾಸರಿ ಪರಿಶೀಲಿಸಿ ವರದಿ ಸಲ್ಲಿಸಬೇಕು. ಕೆಲ ರೈತರು ಒಣಗುತ್ತಿರುವ ಬೆಳೆಗಳನ್ನು ನಾಶಪಡಿಸುತ್ತಿದ್ದು, ರೈತರ ಜಮೀನಗಳಿಗೆ ತೆರಳಿ ಪರಿಶೀಲನೆ ನಡೆಸುವಂತೆ ಸಹಾಯಕ ಕೃಷಿ ಅಧಿಕಾರಿಗಳಿಗೆ ಜಿ. ಮಂಜುನಾಥ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net