

ಚನ್ನರಾಯಪಟ್ಟಣ: ಹೇಮಾವತಿ ನದಿಯಿಂದ ತಾಲೂಕಿನ ಎಲ್ಲ ಗ್ರಾಮಗಳ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನೀರು ನೈರ್ಮಲ್ಯ ಕುರಿತು ಮಾಹಿತಿ, ಶಿಕ್ಷಣ ಮತ್ತು ಸಂವಹನ ಇಲಾಖೆ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜಲಜೀವನ್ ಮಿಷನ್ ಯೋಜನೆಯಡಿ ತಾಲೂಕಿನಲ್ಲಿ 435 ಹಳ್ಳಿಗಳ ಮನೆಗಳಿಗೆ ನಲ್ಲಿ ಮೂಲಕ ಕುಡಿಯುವ ನೀರು ಒದಗಿಸಲಾಗುವುದು. ಈಗಾಗಲೇ 135 ಕಡೆ ಓವರ್‌ಹೆಡ್ ಟ್ಯಾಂಕ್‌ಗಳು ನಿರ್ಮಾಣ ಹಂತದಲ್ಲಿದ್ದು, ಒಟ್ಟು 378 ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುವುದು ಎಂದರು.
ಈ ಯೋಜನೆಯಡಿ ತಾಲೂಕಿನ ಪ್ರತಿಯೊಬ್ಬ ವ್ಯಕ್ತಿಗೆ ನಿತ್ಯ 55 ಲೀಟರ್ ಶುದ್ಧ ಕುಡಿಯುವ ನೀರು ಕೊಡಬಹುದು ಎಂದು ಪರಿಗಣಿಸಲಾಗಿದೆ. ಈಗಾಗಲೇ ತಾಲೂಕಿನ ಹಳ್ಳಿಗಳಲ್ಲಿ ಹೊಸದಾಗಿ ಪೈಪ್‌ಲೈನ್ ಅಳವಡಿಸುವುದು ಹಾಗೂ ಪ್ರತಿ ಮನೆಗೆ ಶುದ್ಧಕುಡಿಯುವ ನೀರು ಒದಗಿಸಲು ನಲ್ಲಿಗಳನ್ನು ಅಳವಡಿಸುವ ಕಾರ್ಯ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಜಲಜೀವನ್ ಮಿಷನ್ ಕಾಮಗಾರಿ 18 ತಿಂಗಳಲ್ಲಿ ಮುಕ್ತಾಯವಾಗಬೇಕಿದ್ದು, ಶುದ್ಧ ಕುಡಿಯುವ ನೀರು ಯೋಜನೆ ಸಾಕಾರಗೊಳ್ಳಲು ಅಧಿಕಾರಿಗಳು ಸನ್ನದ್ಧರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ತಾಲೂಕು ಪಂಚಾಯಿತಿ ಇಒ ಜಿ.ಆರ್.ಹರೀಶ್ ಮಾತನಾಡಿ, ಮನೆ-ಮನೆಗೆ ಗಂಗೆ ಎಂಬ ಯೋಜನೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮತ್ತು ಆಯಾ ಗ್ರಾಮ ಪಂಚಾಯಿತಿಗಳ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸಿ.ಜಿ.ಗೀತಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಳಿನಾ, ಪುರಸಭೆ ಮುಖ್ಯಾಧಿಕಾರಿ ಕೆ.ಎನ್.ಹೇಮಂತ್, ಇತರರು ಉಪಸ್ಥಿತರಿದ್ದರು.