

ಮೈಸೂರು: ದೇಶದಲ್ಲಿ ದಿನದಿಂದ ದಿನಕ್ಕೆ ಲೋಕಸಭಾ ಚುನಾವಣೆ ಕಾವು ಏರುತ್ತಿದ್ದು, ಈ ಮಧ್ಯೆ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ(ಮೈಲ್ಯಾಕ್) ಚುನಾವಣೆಗೆ ಅಗತ್ಯವಾಗಿ ಬೇಕಾದ ಅಳಿಸಲಾಗದ ಶಾಯಿ ಪೂರೈಕೆ ಮಾಡಲು ಕಾರ್ಯಪ್ರವೃತ್ತವಾಗಿದ್ದು, ಈ ಬಾರಿ 26.55 ಲಕ್ಷ ಅಳಿಸಲಾಗದ ಶಾಯಿ ಬಾಟಲುಗಳನ್ನು ಸರಬರಾಜು ಮಾಡುತ್ತಿದೆ.
ದೇಶದ ಎಲ್ಲ ಚುನಾವಣೆಗಳಿಗೆ ಅಳಿಸಲಾಗದ ಶಾಯಿ(ಇಂಕ್ ಬಾಟಲ್)ಯನ್ನು 1962ರಿಂದಲೂ ಪೂರೈಸುತ್ತಾ ಬಂದಿರುವ ಸರ್ಕಾರಿ ಸ್ವಾಮ್ಯದ ಮೈಲ್ಯಾಕ್‌ಗೆ 2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ 10 ಎಂಎಲ್ ಪ್ರಮಾಣದ 26.55 ಲಕ್ಷ ಬಾಟಲ್ ಇಂಕ್ ಅನ್ನು ಪೂರೈಸುವಂತೆ ಭಾರತ ಚುನಾವಣಾ ಆಯೋಗದಿಂದ ಬೇಡಿಕೆ ಬಂದಿದೆ. 2023ರ ಡಿಸೆಂಬರ್‌ನಲ್ಲೇ ಬೇಡಿಕೆ ಬಂದಿದ್ದು, ಅಂದಿನಿಂದಲೇ ಉತ್ಪನ್ನ ತಯಾರಿಕೆಯೂ ಆರಂಭವಾಗಿದೆ. ಇಷ್ಟು ಪ್ರಮಾಣದ ಇಂಕ್ ಬಾಟಲ್ ಬೇಡಿಕೆಯಿಂದಾಗಿ ಮೈಲ್ಯಾಕ್‌ಗೆ 55 ಕೋಟಿ ರೂ. ಆದಾಯ ಬಂದಿದೆ.
ಮಾರ್ಚ್ 15 ರೊಳಗೆ ದೇಶದ ಎಲ್ಲ ರಾಜ್ಯಗಳ ಚುನಾವಣಾ ಆಯುಕ್ತರ ಕಚೇರಿಗಳಿಗೆ ಬೇಡಿಕೆ ಪ್ರಮಾಣದಷ್ಟು ಶಾಯಿ ಬಾಟಲ್ ಪೂರೈಸುವಂತೆ ಲಿಖಿತ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಈಗಾಗಲೇ ಮೈಲ್ಯಾಕ್ ಅನೇಕ ರಾಜ್ಯಗಳಿಗೆ ಪೂರೈಕೆ ಮಾಡಿದ್ದಾರೆ. ದೂರದ ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗೋವಾ, ಅರುಣಾಚಲ ಪ್ರದೇಶ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ರಾಜ್ಯಗಳಿಗೆ ಸೇರಿದಂತೆ ಬಹುತೇಕ ರಾಜ್ಯಗಳಿಗೆ ಇಂಕ್ ಬಾಟಲ್‌ಗಳನ್ನು ಪೂರೈಕೆ ಮಾಡಿದ್ದು, ಮುಂದಿನ ಕೆಲದಿನಗಳಲ್ಲಿ ಇನ್ನಷ್ಟು ರಾಜ್ಯಗಳಿಗೆ ಶಾಯಿ ಪೂರೈಸಲಿದೆ. 10 ಎಂಎಲ್ ಬಾಟಲ್‌ನಿಂದ 700 ಮತದಾರರ ಬೆರಳಿಗೆ ಶಾಯಿಯ ಗುರುತು ಹಾಕಬಹುದಾಗಿದೆ. ಆ ಪೈಕಿ ಉತ್ತರಪ್ರದೇಶಕ್ಕೆ ಅತೀ ಹೆಚ್ಚು 3.58 ಲಕ್ಷ ಬಾಟಲ್ ಹಾಗೂ ಲಕ್ಷದ್ವೀಪಕ್ಕೆ ಅತೀ ಕಡಿಮೆ 125 ಬಾಟಲ್ ಶಾಯಿಯನ್ನು ಕಳುಹಿಸಲಾಗಿದೆ.
ಗೌಪ್ಯತೆ ಪಾಲನೆ:
‘ಭಾರತ ಚುನಾವಣಾ ಆಯೋಗದ ಕೋರಿಕೆಯಂತೆ ನಾವು ಅಳಿಸಲಾಗದ ಶಾಯಿ ಪೂರೈಸಲು ಸರ್ವ ರೀತಿಯ ಸಿದ್ಧತೆ ಮಾಡಿಕೊಂಡು 19 ರಾಜ್ಯಗಳಿಗೆ ಈಗಾಗಲೇ ಶಾಯಿ ಬಾಟಲ್‌ಗಳನ್ನು ತಲುಪಿಸಿದ್ದೇವೆ. ಬೇಡಿಕೆಯಷ್ಟು ಆರ್ಡರ್ ನೀಡುವ ಮೊದಲು ಚುನಾವಣಾ ಆಯೋಗದ ಅಧಿಕಾರಿಗಳು ಮೈಸೂರಿಗೆ ಬಂದು ಕಾರ್ಖಾನೆಯಲ್ಲಿ ತಯಾರಾಗುವ ಅಳಿಸಲಾಗದ ಶಾಯಿ ಪ್ರಯೋಗಾಲಯ, ಬಳಸುವ ಕಚ್ಚಾ ಪದಾರ್ಥ, ಉತ್ಪಾದನಾ ಪ್ರಕ್ರಿಯೆ, ಪ್ಯಾಕಿಂಗ್ ಮುಂತಾದವುಗಳ ಬಗ್ಗೆ ಪರಿಶೀಲಿಸಿ ತೃಪ್ತಿಕರ ಎನಿಸಿದ ನಂತರವಷ್ಟೇ ನಮಗೆ ಇಂಕ್ ಪೂರೈಸಲು ಆದೇಶ ನೀಡಿದ್ದಾರೆ. ಜತೆಗೆ ನಮ್ಮ ಅಧಿಕಾರಿಗಳನ್ನೂ ದೆಹಲಿಗೆ ಎರಡು ಬಾರಿ ಕರೆಸಿಕೊಂಡು ಸಭೆ ನಡೆಸಿ ಕೆಲ ಸಲಹೆ-ಸೂಚನೆ ನೀಡಿದ್ದರಲ್ಲದೆ, ಚುನಾವಣಾ ಹಿತದೃಷ್ಟಿಯಿಂದ ಗೌಪ್ಯತೆ ಕಾಪಾಡುವ ಬಗ್ಗೆಯೂ ಕೆಲ ಸೂಚನೆಗಳನ್ನೂ ನೀಡಿದ್ದರು. ಅವುಗಳನ್ನು ನಾವು ಚಾಚೂ ತಪ್ಪದೆ ಪಾಲನೆ ಮಾಡುತ್ತಿದ್ದೇವೆ’ ಎಂದು ಮೈಲ್ಯಾಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಮೊಹಮದ್ ಇರ್ಫಾನ್ ತಿಳಿಸಿದ್ದಾರೆ.
ಹೊರ ದೇಶಕ್ಕೂ ಪೂರೈಕೆ:
1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯನ್ನು ಸ್ಥಾಪಿಸಿದರು. 1962ರಲ್ಲಿ ಆರಂಭವಾದ ಅಳಿಸಲಾಗದ ಶಾಯಿ ತಯಾರಿಕೆ ವಿಶ್ವವಿಖ್ಯಾತಿ ಮನ್ನಣೆ ಪಡೆದಿದೆ.
ಹೊರರಾಜ್ಯದ ಚುನಾವಣೆಗೆ ಮಾತ್ರ ಅಲ್ಲದೆ ಹೊರ ದೇಶಕ್ಕೂ ಇಲ್ಲಿಂದಲೇ ಶಾಯಿ ಪೂರೈಕೆ ಆಗುತ್ತಾ ಬಂದಿರುವುದು ವಿಶೇಷ. ಕಾಂಬೋಡಿಯಾ, ಬರ್ಕಿನಾ, ಫಾಸೋ, ಫಿಜಿ ಐಲ್ಯಾಂಡ್, ಪಾಪುವ ನ್ಯೂಗುನ್ನಿಯಾ, ಟರ್ಕಿ, ಸೌತ್ ಆಫ್ರಿಕಾ, ಮಂಗೋಲಿಯಾ ಸೇರಿದಂತೆ ಪ್ರಪಂಚದ 30ಕ್ಕೂ ಹೆಚ್ಚು ರಾಷ್ಟ್ರಗಳ ಸಾರ್ವತ್ರಿಕ ಚುನಾವಣೆಗೂ ಇಲ್ಲಿಯ ಅಳಿಸಲಾಗದ ಶಾಯಿ ರವಾನಿಸಲಾಗಿದೆ ಎನ್ನುವುದು ಹೆಮ್ಮೆಯ ವಿಚಾರವೇ ಸರಿ.