ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರ ಪೂರೈಸಿ

HKR PROTEST
Published on

ಹಿರೇಕೆರೂರ: ರೈತರಿಗೆ ಸಕಾಲಕ್ಕೆ ಅವಶ್ಯಕತೆಗೆ ತಕ್ಕಂತೆ ರಸಗೊಬ್ಬರ ಪೂರೈಸಬೇಕು. ಅತಿವೃಷ್ಟಿಯಿಂದ ಬೆಳೆ ಹಾಳಾಗಿದ್ದು, ಬೆಳೆ ನಷ್ಟ ಪರಿಹಾರ ಹಾಗೂ ಮಧ್ಯಂತರ ಬೆಳೆ ವಿಮೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಕೆ.ಎಸ್.ಪುಟ್ಟಣ್ಣಯ್ಯ ಬಣದ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಸೋಮವಾರ ಪಟ್ಟಣದ ಪ್ರವಾಸಿ ಮಂದಿರದಿಂದ ತಹಸೀಲ್ದಾರ್ ಕಚೇರಿಯವರೆಗೆ ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ಜಮೀನಿನಲ್ಲಿ ಅತಿಯಾದ ತೇವಾಂಶದಿಂದ ತೋಟಗಾರಿಕೆ ಮತ್ತು ಕೃಷಿ ಬೆಳೆಗಳು ಹಾಳಾಗಿವೆ. ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ರೈತರ ಬೇಡಿಕೆಯಂತೆ ಈ ಬಾರಿ ರಸಗೊಬ್ಬರ ವಿತರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ.

ಬದುಕಿ ಉಳಿದ ಅಲ್ಪಸ್ವಲ್ಪ ಬೆಳೆಗಳನ್ನು ತೇವಾಂಶದಿಂದ ರಕ್ಷಿಸಿಕೊಳ್ಳಲು ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಖಾಸಗಿ ಅಂಗಡಿಯವರು ಇದನ್ನು ತಮ್ಮ ಬಂಡವಾಳ ಮಾಡಿಕೊಂಡು ತಮ್ಮ ಬಳಿ ಇದ್ದಂತಹ ಯೂರಿಯಾ ಗೊಬ್ಬರವನ್ನು ಹೆಚ್ಚಿನ ದರಕ್ಕೆ ಮಾರುತ್ತಿದ್ದಾರೆ. ಕಳೆದ ವರ್ಷ ಬೆಳೆ ವಿಮೆ ತುಂಬಿದ 12 ಪಂಚಾಯಿತಿ ವ್ಯಾಪ್ತಿಯ ರೈತರಿಗೆ ವಿಮಾ ಹಣ ಬಂದಿಲ್ಲ. ಬ್ಯಾಂಕುಗಳು ಸಕಾಲಕ್ಕೆ ಬೆಳೆ ಸಾಲ ಕೊಡಲು ನಿರಾಕರಿಸುತ್ತಿದ್ದು, ಇದಕ್ಕೆ ಒಟಿಎಸ್​ನಲ್ಲಿ ಮರುಪಾವತಿ ನೀಡಿದ ರೈತರಿಗೆ ಸಿಬಿಲ್​ನಲ್ಲಿ ಬರುತ್ತಿರುವುದರಿಂದ ಸಾಲ ಕೊಡಲು ಸಾಧ್ಯವಿಲ್ಲ ಎಂದು ಕೇಂದ್ರ ಬ್ಯಾಂಕುಗಳು ನೀರಾಕರಿಸುತ್ತಿದ್ದಾರೆ.

ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ, ಕೃಷಿ ಸಾಲ ಸಿಬಿಲ್​ನಿಂದ ಹೊರಗಿಟ್ಟು ರೈತರಿಗೆ ಸಾಲ ನೀಡಬೇಕು ಎಂದು ಒತ್ತಾಯಿಸಿದರು. ನಂತರ ತಹಸೀಲ್ದಾರ್ ಎಂ. ರೇಣುಕಾ ಅವರಿಗೆ ಈ ಕುರಿತ ಮನವಿ ಸಲ್ಲಿಸಲಾಯಿತು.

ರೈತ ಸಂಘದ ತಾಲೂಕಾಧ್ಯಕ್ಷ ಪ್ರಭುಗೌಡ ಪ್ಯಾಟಿ, ಎಚ್.ಎಚ್. ಮುಲ್ಲಾ, ಶಂಕ್ರಪ್ಪ ಶಿರಗಂಬಿ, ಶಂಭಣ್ಣ ಮುತ್ತಗಿ, ಗಂಗನಗೌಡ ಮುದಿಗೌಡ್ರ, ರಾಜು ಮುತ್ತಗಿ, ಶಾಂತನಗೌಡ ಪಾಟೀಲ, ಯಶವಂತ ತಿಮಲಾಪುರ, ಶಂಕ್ರಣ್ಣ ಪುಟ್ಟಳವರ, ನವೀನ ಹುಲ್ಲತ್ತಿ, ಮರಡಿಯಪ್ಪ ಬಣಕಾರ, ಮರಿಗೌಡ ಪಾಟೀಲ, ಮಲ್ಲನಗೌಡ ಮಾಳಗಿ, ಸೋಮಪ್ಪ ಕಳ್ಳೇರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net