ಪಂಪ್‌ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್ ಪೂರೈಸಿ

JLR protest
Published on

ಜಗಳೂರು: ಕೃಷಿ ಪಂಪ್‌ಸೆಟ್‌ಗಳಿಗೆ ಹಗಲಿನಲ್ಲಿ ಏಳು ತಾಸು ವಿದ್ಯುತ್ ಪೂರೈಕೆ ಮಾಡುವಂತೆ ಒತ್ತಾಯಿಸಿ ಶುಕ್ರವಾರ ರೈತರು ಬೆಸ್ಕಾಂ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.
ಮಳೆ ಬಾರದೇ ಕಂಗಾಲಾಗಿರುವ ರೈತರಿಗೆ ಬೆಸ್ಕಾಂ ಅಧಿಕಾರಿಗಳು ಗಾಯದ ಮೇಲೆ ಬರೆ ಎಳೆಯುತ್ತಿದ್ದಾರೆ. ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ಪೂರೈಸಬೇಕು. ಆದರೆ ಮೂರು ತಾಸು ಕೊಡಲು ಬೇಜವಾಬ್ದಾರಿ ವರ್ತನೆ ತೋರುತ್ತಿದ್ದಾರೆ ಎಂದು ಅರಿಶಿಣಗುಂಡಿ ಗ್ರಾಮದ ರೈತರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.
ಮಳೆ ಕೈಕೊಟ್ಟಿದ್ದರಿಂದ ರೈತರು ಕಂಗಾಗಲಾಗಿದ್ದಾರೆ. ಹಾಕಿದ ಬಂಡವಾಳವೂ ಬರದೇ ಸಂಕಷ್ಟದಲ್ಲಿದ್ದೇವೆ. ನೀರಾವರಿ ಬೆಳೆಗಳನ್ನು ಉಳಿಸಿಕೊಳ್ಳಲು ರಾತ್ರಿ ಹಗಲು ಕಷ್ಟ ಪಡುತ್ತಿದ್ದೇವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಬೆಸ್ಕಾಂ ಅಧಿಕಾರಿಗಳು ಬೇಕಾಬಿಟ್ಟಿ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ತಾಂತ್ರಿಕ ಕಾರ್ಯಗಳ ನೆಪವೊಡ್ಡಿ ಗಂಟೆಗಟ್ಟಲೆ ವಿದ್ಯುತ್ ಕಡಿತಗೊಳಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಿಂಗಳಿಗೆ ವೇತನ ಪಡೆಯುವ ಅಧಿಕಾರಿಗಳು ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ವಿದ್ಯುತ್ ಪೂರೈಕೆ ಮಾಡದೇ ರೈತರೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾರೆ. ದೂರವಾಣಿ ಕರೆ ಮಾಡಿದರೆ ಸ್ವಿಚ್‌ಆಫ್ ಮಾಡಿಕೊಳ್ಳುತ್ತಾರೆ. ಟಿಸಿಗಳು ಸುಟ್ಟರೂ ಕೊಡದೆ ಅಧಿಕಾರಿಗಳು ಸತಾಯಿಸುತ್ತಾರೆ. ಹೊಸ ಟಿಸಿ ಕೊಡಲು ಅಧಿಕಾರಿಗಳು, ಲೈನ್‌ಮನ್‌ಗಳು ಲಂಚ ಕೇಳುತ್ತಾರೆ. ಕೊಡದೆ ಇದ್ದರೆ ರೈತರನ್ನು ಅಲೆದಾಡಿಸುತ್ತಾರೆ ಎಂದು ದೂರಿದರು.

ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ಸುಧಾಮಣಿ ರೈತರನ್ನು ಮನವೋಲಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಎಇಇ, ಎಸ್‌ಒ ರಂಗನಾಥ್ ಹಾಗೂ ಲೈನ್‌ಮನ್ ರುದ್ರೇಗೌಡ ವಿರುದ್ಧ ಧಿಕ್ಕಾರ ಕೂಗಿದರು. ಸರಿಯಾಗಿ ಕೆಲಸ ಮಾಡದ ಲೈನ್‌ಮನ್ ರುದ್ರೇಗೌಡರನ್ನು ತಕ್ಷಣವೇ ಅಮಾನತು ಮಾಡಿ ಇಲ್ಲವೆ ವರ್ಗಾವಣೆ ಮಾಡಿ ಎಂದು ಪಟ್ಟು ಹಿಡಿದರು. ಪಿಎಸ್‌ಐ ಎಸ್.ಡಿ ಸಾಗರ್ ಆಗಮಿಸಿ ರೈತರನ್ನು ಸಮಾಧಾನ ಪಡಿಸಿದರು.
ಈ ಸಂದರ್ಭದಲ್ಲಿ ರೈತರಾದ ಬಸವರಾಜ್, ಹನುಮಂತಗೌಡ್ರು, ಎನ್.ಸಿ ಮಂಜುನಾಥ್, ಲೋಕೇಶಪ್ಪ, ರಾಜಣ್ಣ, ಬಸವರಾಜ್, ಸಿದ್ದೇಶ್, ಭೀಮರಾಜ್, ಅಜ್ಜಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net