ಕಲ್ಯಾಣ ಆಶಯಕ್ಕೆ ಪೂರಕ ಯೋಜನೆ

Kalyana
Published on

ಬೆಂಗಳೂರು: ‘ಕಲ್ಯಾಣ ಕರ್ನಾಟಕ’ ಆಶಯಕ್ಕೆ ಒಪು್ಪವಂತಹ ವಿಶಿಷ್ಟ ಹಾಗೂ ಪ್ರಯೋಗಶೀಲ ಯೋಜನೆಯನ್ನು ಬಜೆಟ್​ನಲ್ಲಿ ಸೇರಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪೂರ್ವತಯಾರಿ ನಡೆಸಿದ್ದು, ಆ ಮೂಲಕ ಪ್ರಾಂತದ ಹೆಸರು ಬದಲಾವಣೆ ಉದ್ದೇಶ ಸಾರಲು ಮುಂದಾಗಿದ್ದಾರೆ. ಕಡಿಮೆ ಖರ್ಚು, ಹೆಚ್ಚು ಕೆಲಸ ಹಾಗೂ ಗರಿಷ್ಠ ಅನುಕೂಲತೆ ತಳಹದಿಯ ಮೇಲೆ ರೂಪಿಸಲಿರುವ ಕಾಯರ್å ಚಟುವಟಿಕೆಗಳಿಗೆ ಪ್ರಾರಂಭಿಕವಾಗಿ 500 ಕೋಟಿ ರೂ. ನಿಗದಿಗೆ ಸಿಎಂ ಗಂಭೀರ ಚಿಂತನೆ ನಡೆಸಿದ್ದಾರೆಂದು ಉನ್ನತ ಮೂಲಗಳು ತಿಳಿಸಿವೆ.

ಪ್ರಯೋಗಾತ್ಮಕ ಯೋಜನೆ ಅನುಷ್ಠಾನಕ್ಕೆ ಪೂರಕವಾಗಿ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಸಂಘ ರಚಿಸಿ ನೋಂದಾಯಿಸಲಾಗಿದೆ. ಅಲ್ಲದೆ, ಕಳೆದ 16 ವರ್ಷಗಳಿಂದ ವಿಕಾಸ ಅಕಾಡೆಮಿ ನಿರ್ವಾಹಕ ವಿಶ್ವಸ್ಥರಾಗಿ ಬಸವರಾಜ ಪಾಟೀಲ್ ಸೇಡಂ ಅವರ ಪರಿಶ್ರಮ ಹಾಗೂ ದೃಷ್ಟಿಯಂತೆ ಸೃಷ್ಟಿ, ಪ್ರಕೃತಿ ಕೇಂದ್ರಿತ ಅಭಿವೃದ್ಧಿ, ಆಂತರಿಕ, ಬಾಹ್ಯ ವಿಕಾಸದ ಪ್ರಯೋಗಗಳನ್ನು ಸಿಎಂ ಗಮನಿಸಿ ಸಂಘದ ಅಧ್ಯಕ್ಷರನ್ನಾಗಿ ಈಗಾಗಲೇ ನೇಮಿಸಿ ಸಂಪುಟ ದರ್ಜೆ ಸ್ಥಾನಮಾನ ನೀಡಿದ್ದಾರೆ.

ವಿಶಿಷ್ಟ ಯೋಜನೆ ತಿರುಳು: ಮಹಾತ್ಮ ಗಾಂಧೀಜಿ ಪ್ರಣೀತ ಸೂತ್ರ ಹಾಗೂ ಶೇ.80 ಸ್ಥಳೀಯ ಸಂಪನ್ಮೂಲ ಮೇಲಿನ ಅವಲಂಬನೆಯು ಉದ್ದೇಶಿತ ವಿಶಿಷ್ಟ ಯೋಜನೆಯ ತಿರುಳು. ಶಿಕ್ಷಣ, ಕೃಷಿ, ಗಾಂಧೀಜಿ ಪರಿಕಲ್ಪನೆಯ ಗ್ರಾಮ ವಿಕಾಸ, ಮಹಿಳಾ ಸಬಲೀಕರಣ, ಆರೋಗ್ಯ, ಕೌಶಲಪೂರ್ಣ ಮಾನವ ಸಂಪನ್ಮೂಲ ಸೃಜನೆ, ಸಾಹಿತ್ಯ, ಸಂಗೀತ, ಕಲೆ ಕ್ಷೇತ್ರಗಳ ಕಾರ್ಯಚಟುವಟಿಕೆಗಳು ಈ ಯೋಜನೆಯ ಭಾಗವಾಗಿವೆ. ಮುಖ್ಯವಾಗಿ ಭೌತಿಕ ಹಾಗೂ ಆರ್ಥಿಕ ಪ್ರಗತಿ ಸಾಧಿಸುವುದಷ್ಟೇ ಯೋಜನೆ ಉದ್ದೇಶವಲ್ಲ. ರೀತಿ, ರಿವಾಜು, ಜೀವನ ಶೈಲಿಯಲ್ಲಿ ಬದಲಾವಣೆ, ಅರಿವು, ಆರೋಗ್ಯ ಜಾಗೃತಿ, ಮನೆ ಮದ್ದು, ಯೋಗ, ಪ್ರೇರಣಾದಾಯಕ ಉಪನ್ಯಾಸ, ನಿರುದ್ಯೋಗಿ ಯುವ ಜನತೆ ಸ್ವಾವಲಂಬಿ ಬದುಕು ಕಟ್ಟಿಕೊಟ್ಟು ನೈಜ ಅಭಿವೃದ್ಧಿ ಸಾಧಿಸಬೇಕು ಎನ್ನುವುದು ಸರ್ಕಾರದ ಚಿಂತನೆಯಾಗಿದೆ.

ಪ್ರಾಂತದ ಯುವ ಜನತೆಯಲ್ಲಿರುವ ತಾಕತ್ತು ಗುರುತಿಸಿ ನೈಪುಣ್ಯತೆ ಸ್ಪರ್ಶ ನೀಡಿ 5 ಲಕ್ಷ ಸ್ವಯಂ ಉದ್ಯೋಗ ಸೃಷ್ಟಿಸುವುದು. 1,000 ಸಾವಯವ ಕೃಷಿ ಕಾರ್ಯಪಡೆ ರಚನೆ, 10 ಲಕ್ಷ ಹಣ್ಣಿನ ಸಸಿಗಳು ಸೇರಿ 1 ಕೋಟಿ ಸಸಿ ನೆಡುವುದು, 10 ದೇಸಿ ತಳಿ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ, 10 ಕೋಟಿ ರೂ. ಮೌಲ್ಯದ ಉತ್ತಮ ಸಾಹಿತ್ಯ ಪ್ರಸರಣ ಇನ್ನಿತರ ಚಟುವಟಿಕೆ ಯೋಜನೆ ಒಳಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಮಂಡಳಿ, ಸಂಘ ಎರಡೂ ವಿಭಿನ್ನ

ಕಲ್ಯಾಣ ಕರ್ನಾಟಕ ಪ್ರಾಂತ ಅಭಿವೃದ್ಧಿ ಮಂಡಳಿ ಅಬಾಧಿತ. ಸಾರ್ವಜನಿಕ ಆಸ್ತಿ ಸೃಜನೆ, ಭೌತಿಕ ಹಾಗೂ ಆರ್ಥಿಕ ಪ್ರಗತಿಯೇ ಮಂಡಳಿ ಅಭಿವೃದ್ಧಿ ಮಾನದಂಡ. ಆದರೆ, ಸ್ವಾವಲಂಬಿ ಬದುಕು, ಆಂತರಿಕ ಹಾಗೂ ಬಾಹ್ಯ ವಿಕಾಸದ ಮೂಲಕ ಜನರಮಟ್ಟ ಎತ್ತರಿಸುವುದು ಸಂಘದ ಮುಖ್ಯ ಧ್ಯೇಯ. ಮಂಡಳಿ ಹಾಗೂ ಸಂಘದ ಕಾರ್ಯಕ್ಷೇತ್ರ ಏಕರೂಪವಾಗಿದ್ದು, ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ.

| ಮೃತ್ಯುಂಜಯ ಕಪಗಲ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net