

ಹುಬ್ಬಳ್ಳಿ: ಇಲ್ಲಿಯ ಮಂಟೂರ ರಸ್ತೆಯ ಅರಳಿಕಟ್ಟಿ ಕಾಲನಿ ಕ್ರಾಸ್ ಬಳಿ ನಡೆಯುತ್ತಿರುವ ಎಲ್ ಆ್ಯಂಡ್ ಟಿ ನೀರು ಸರಬರಾಜು ಕಾಮಗಾರಿ ವೇಳೆ ಮಣ್ಣು ಕುಸಿದು ಸೂಪರ್‌ವೈಸರ್ ಮೃತಪಟ್ಟಿದ್ದು, ಕಾರ್ಮಿಕರೊಬ್ಬರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಎಲ್‌ಆ್ಯಂಡ್‌ಟಿ ಸೂಪರ್‌ವೈಸರ್ ಸಾಯಿನಗರದ ಚೇತನ ಜಾಧವ (32) ಮೃತರು. ಗಾಯಗೊಂಡಿರುವ ಕಾರ್ಮಿಕ ಹಳ್ಯಾಳದ ಮೌಲಾಸಾಬ್ ಮ್ಯಾಳಗಿಮನಿ ಅವರನ್ನು ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಮೃತ ಸೂಪರ್‌ವೈಸರ್ ಕುಟುಂಬದವರ ಆಕ್ರಂದ ಮುಗಿಲುಮುಟ್ಟಿದ್ದು, ಸ್ಥಳಕ್ಕೆ ಎಲ್ ಆ್ಯಂಡ್ ಟಿ ಕಂಪನಿಯವರು ಆಗಮನಿಸುವಂತೆ ಪಟ್ಟು ಹಿಡಿದಿದ್ದಾರೆ.
ಸುದ್ದಿ ತಿಳಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಕೆಎಂಸಿಆರ್‌ಐಗೆ ಭೇಟಿ ನೀಡಿ ಕುಟುಂಬದವರಿಂದ ಮಾಹಿತಿ ಪಡೆದಿದ್ದಾರೆ. ಪಾಲಿಕೆ ಸದಸ್ಯ ಧೋರಜ್ ಮನ್ನೆಕುಂಟ್ಲ, ಕಾಂಗ್ರೆಸ್ ಮುಖಂಡ ಶರೀಫ್ ಬಾಬುಸಾಬ್ ಆದ್ವಾನಿ ಕೂಡ ಕಾಮಗಾರಿ ನಡೆಯುವ ಸ್ಥಳದಲ್ಲಿದ್ದು ಪರಿಶೀಲಿಸಿದ್ದಾರೆ. ಈ ಕುರಿತು ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.