

ರಾಮನಗರ: ಕೇಂದ್ರ ಸರ್ಕಾರದ ಬಡತನ ನಿಮೂಲನಾ ಯೋಜನೆ-2015ರ ಕಾರ್ಯಕ್ರಮಗಳು ಅರ್ಹರಿಗೆ ತಲುಪುತ್ತಿವೆಯೇ ಎಂಬುದರ ಬಗ್ಗೆ ಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಬಿ.ಜಿ. ರಮಾ ಹೇಳಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಯೋಜನೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಲಿದೆ. ಬಡ ಜನರ ಉನ್ನತಿಗಾಗಿ ರೂಪಿಸಿದ ಯೋಜನೆ ಅರ್ಹರಿಗೆ ತಲುಪುತ್ತಿಲ್ಲ ಎನ್ನುವ ದೂರುಗಳು ವ್ಯಾಪಕವಾಗಿರುವುದರಿಂದ ಕೋರ್ಟ್ ಮೇಲ್ವಿಚಾರಣೆ ನಡೆಸಲಿದೆ ಎಂದು ತಿಳಿಸಿದರು.
ಸಮಿತಿ ನೇಮಕ
ಯೋಜನೆ ಮೇಲ್ವಿಚಾರಣೆಗೆ ಸಮಿತಿ ನೇಮಕ ಮಾಡಲಾಗಿದೆ. ಇವರು ಕಾನೂನು ಸೇವೆಗಳ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಾನೂನು ಸೇವಾ ಅಧಿಕಾರಿಗೆ ಮೂವರು ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಹಕಾರ ನೀಡಲಿದ್ದಾರೆ. ಇವರು ಗ್ರಾಮದ ಪ್ರತಿ ಮನೆಗೆ ತೆರಳಿ ಯೋಜನೆಯ ನೆರವು ತಲುಪಿದೆಯೇ ಎಂಬುದರ ಮಾಹಿತಿ ಪಡೆಯಲಿದ್ದಾರೆ. ಮನೆ ಭೇಟಿ ವೇಳೆ ಅರ್ಹ ವ್ಯಕ್ತಿಗೆ ಯೋಜನೆ ತಲುಪದಿದ್ದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಫಲಾನುಭವಿಗೆ ಯೋಜನೆಯ ನೆರವು ತಲುಪುವಂತೆ ಮಾಡಲಾಗುವುದು ಎಂದು ರಮಾ ಮಾಹಿತಿ ನೀಡಿದರು.
ತರಬೇತಿ
ನೇಮಕಗೊಂಡಿರುವ ಕಾನೂನು ಸೇವೆ ಅಧಿಕಾರಿ ಹಾಗೂ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ. ಸಮಾಜ ಸೇವಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು, ಕಾನೂನು ವಿದ್ಯಾರ್ಥಿಗಳು ಮತ್ತು ಸ್ವಯಂ ಸೇವಕರು ಸಹ ಯೋಜನೆಗಳು ಫಲಾನುಭಗಳಿಗೆ ತಲುಪುತ್ತಿವೆಯೆ ಎನ್ನುವ ಮಾಹಿತಿ ನೀಡಲಿದ್ದಾರೆ.
ಉಸ್ತುವಾರಿಗಳ ನೇಮಕ
ಜಿಲ್ಲೆಯಲ್ಲಿ ರಚನೆಯಾಗಿರುವ ಸಮಿತಿಗಳಿಗೆ ಉಸ್ತುವಾರಿ ನೇಮಕ ಮಾಡಲಾಗಿದೆ. ರಾಮನಗರ ತಾಲೂಕಿಗೆ ರಾಮನಗರದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ. ಅದೇ ರೀತಿ ಚನ್ನಪಟ್ಟಣ ತಾಲೂಕಿಗೆ ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಕನಕಪುರ ತಾಲೂಕಿಗೆ ರಾಮನಗರದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಮಾಗಡಿ ತಾಲೂಕಿಗೆ ರಾಮನಗರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸಿಜೆಎಂ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ. ವೆಂಕಟಪ್ಪ ಹೇಳಿದರು.
ಸಾರ್ವಜನಿಕರಿಗೆ ಸಲಹೆ
ಸರ್ಕಾರಿ ಯೋಜನೆಗಳು ಅರ್ಹರಿಗೆ ತಲುಪಿಸಲು ಏನು ಕ್ರಮ ತೆಗೆದುಕೊಳ್ಳಬೇಕು ಮತ್ತು ಹೇಗೆ ತಲುಪಿಸಬೇಕು ಎನ್ನುವುದನ್ನು ಅರಿತುಕೊಳ್ಳಲು ಜಿಲ್ಲೆಯಲ್ಲಿರುವ ಗ್ರಾಪಂಗಳ ಆವರಣದಲ್ಲಿ ಸಲಹಾ ಪೆಟ್ಟಿಗೆ ಇರಲಿದೆ. ಸಾರ್ವಜನಿಕರೂ ಕೂಡ ಸಲಹೆಗಳನ್ನು ಬರೆದು ತಿಳಿಸಬಹುದಾಗಿದೆ.
ಬಡವರಿಗಾಗಿ ಸರ್ಕಾರ ವಿವಿಧ ಯೋಜನೆಗಳನ್ನು ರೂಪಿಸಿದೆ. ಯೋಜನೆಗಳ ಮಾಹಿತಿ ಪಡೆದು ಸಾರ್ವಜನಿಕರು ಇವುಗಳನ್ನು ಉಪಯೋಗಿಸಿಕೊಳ್ಳಬೇಕು. | ಬಿ.ಜಿ.ರಮಾ, ಅಧ್ಯಕ್ಷೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ