

ಮೈಸೂರು: ಜನರಲ್ಲಿ ಕ್ಯಾನ್ಸರ್ ಬಗೆಗಿನ ಮೂಢನಂಬಿಕೆ ಹೋಗಲಾಡಿಸಲು ಅರಿವು ಮೂಡಿಸಬೇಕಿದೆ ಎಂದು ಕೆ.ಆರ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ.ಎಚ್.ಪಿ. ಶೋಭ ತಿಳಿಸಿದರು.
ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನಲ್ಲಿ ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಆಯೋಜಿಸಿದ್ದ ಆರೈಕೆ ಅಂತರವನ್ನು ಮುಚ್ಚಿ- ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್ ರೋಗ ಮೊದಲನೇ ಮತ್ತು 2ನೇ ಹಂತದಲ್ಲಿ ಇದ್ದರೆ ಗುಣಪಡಿಸಬಹುದು. 3 ಮತ್ತು 4ನೇ ಹಂತವನ್ನು ತಲುಪಿದರೆ ಗುಣಪಡಿಸುವುದು ಕಷ್ಟವಾಗಬಹುದು. ಹೀಗಾಗಿ, ಕ್ಯಾನ್ಸರ್ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸುವುದರಿಂದ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.
ಭಾರತ್ ಕ್ಯಾನ್ಸರ್ ಆಸ್ಪತ್ರೆ ವೈದ್ಯಕೀಯ ಅಂಕೊಲಾಜಿಸ್ಟ್ ಡಾ.ಜಿ.ಎಚ್. ಅಭಿಲಾಷ್ ಮಾತನಾಡಿ, ಪ್ಲಾಸ್ಟಿಕ್ ಪದಾರ್ಥಗಳಲ್ಲಿ ಆಹಾರ ಸೇವಿಸುವುದು, ತಂಪು ಪಾನೀಯಗಳನ್ನು ಕುಡಿಯುವುದರಿಂದ ಹಾಗೂ ಪದೇ ಪದೇ ಬಳಸಿದ ಅಡುಗೆ ಎಣ್ಣೆ, ಕಲುಷಿತ ನೀರು ಮತ್ತು ಆಹಾರ ಸೇವನೆಯಿಂದ ಕ್ಯಾನ್ಸರ್‌ಹರಡುವ ಸಾಧ್ಯತೆ ಇದೆ ಎಂದರು.
ಕೆ.ಆರ್. ಆಸ್ಪತ್ರೆಯ ಸರ್ಜಿಕಲ್ ಅಂಕೊಲಾಜಿಸ್ಟ್ ಡಾ.ಎಸ್.ಎಸ್. ಪ್ರಕಾಶ್ ಮಾತನಾಡಿ, ನಿರಂತರವಾಗಿ ದೇಹದ ತೂಕ ಕಡಿಮೆ ಆಗುತ್ತಿರುವುದು, ಕೆಮ್ಮಿದಾಗ ರಕ್ತ ಬರುವುದು ಹಾಗೂ ದೇಹದ ಯಾವುದೇ ಭಾಗದಿಂದಲಾದರು ರಕ್ತ ಸ್ರಾವಾಗುವುದು, ಧ್ವನಿಯಲ್ಲಿ ಬದಲಾವಣೆ ಆಗುವುದು ಕ್ಯಾನ್ಸರ್ ಲಕ್ಷಣಗಳಾಗಿರುತ್ತವೆ ಎಂದರು.
ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಹನುಮಂತಚಾರ್ ಜೋಶಿ, ಸರ್ಕಾರಿ ಆಯುರ್ವೇದ ಸಂಶೋಧನಾ ಸಂಸ್ಥೆಯ ಸಹ ನಿರ್ದೇಶಕ ಲಕ್ಷ್ಮಿನಾರಾಯಣ ಶಣೈ, ಎನ್‌ಎಸ್‌ಎಸ್ ಅಧಿಕಾರಿ ಕೆ. ಅಭಿಷೇಕ್ ಇದ್ದರು.