Super Specialty Hospital ಉತ್ತರ ಕನ್ನಡಕ್ಕೆ ಏಕೆ ಅನ್ಯಾಯ.? ಸದನದಲ್ಲಿ ಧ್ವನಿ ಎತ್ತಿದ ಶಾಸಕ ದಿನರಕ ಶೆಟ್ಟಿ

Super Specialty Hospital
Published on

ಕಾರವಾರ: ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Specialty Hospital) ನಿರ್ಮಾಣ ಸಂಬಂಧ ಶಾಸಕ ದಿನಕರ ಶೆಟ್ಟಿ ಅವರು ವಿಧಾನಸಭೆಯಲ್ಲಿ ಮತ್ತೊಮ್ಮೆ ಧ್ವನಿ ಎತ್ತಿದ್ದಾರೆ. ಈ ಹಿಂದೆ ಎರಡು ಬಾರಿ ಅಧಿವೇಶನದಲ್ಲಿ ಈ ಸಂಬಂಧ ಮಾತನಾಡಿದ್ದರು. ಮಂಗಳವಾರ ಬೆಳಗಾವಿ ಅಧಿವೇಶನದ ವೇಳೆ ಮಾತನಾಡಿದ ಅವರು, ಹಿಂದೆ ಬೊಮ್ಮಾಯಿ ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿತ್ತು. ಕುಮಟಾದಲ್ಲಿ ಅದಕ್ಕಾಗಿ ಜಾಗವನ್ನೂ ಗುರುತಿಸಿತ್ತು. ಆದರೆ, Super Specialty Hospital ಆಸ್ಪತ್ರೆ ನಿರ್ಮಾಣದಿಂದ ಈ ಸರ್ಕಾರ ಹಿಂದೆ ಸರಿದಿದ್ದೇಕೆ..?  ಎಂದು ಪ್ರಶ್ನಿಸಿದರು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಮಟಾ, ಹೊನ್ನಾವರ ಭಾಗದಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸುತ್ತಿರುತ್ತವೆ. ಗಾಯಾಳುಗಳನ್ನು ಮಣಿಪಾಲ, ಮಂಗಳೂರಿಗೆ ಕೊಂಡೊಯ್ಯಬೇಕು. ಮಾರ್ಗಮಧ್ಯದಲ್ಲಿ ಸಾಕಷ್ಟು ಜನ ಪ್ರಾಣ ಬಿಡುತ್ತಾರೆ. ಸರ್ಕಾರ ಬದಲಾದಂತೆ ಅತ್ಯಾವಶ್ಯಕ ನೀತಿಗಳು ಬದಲಾಗಬಾರದು. ಉತ್ತರ ಕನ್ನಡಲ್ಲಿ ಬಿಜೆಪಿ ಕಾಂಗ್ರೆಸ್‌ ಎಲ್ಲ ಶಾಸಕರೂ ಇದ್ದಾರೆ. ಎಲ್ಲರಿಗೂ ಆಸ್ಪತ್ರೆ Super Specialty Hospital ಬೇಕು  ಎಂದು ದಿನಕರ ಶೆಟ್ಟಿ ಅಸಮಾಧಾನ ಹೊರ ಹಾಕಿದರು.

Super Specialty Hospital ಸೌಲಭ್ಯವಿಲ್ಲ

ನೀವು ಒಂದು ಜಿಲ್ಲೆಗೆ ಒಂದು ಮೆಡಿಕಲ್‌ ಕಾಲೇಜ್‌ ಎಂದು ಹೇಳುತ್ತೀರಿ. ಕಾರವಾರದಲ್ಲಿ ವೈದ್ಯಕೀಯ ಕಾಲೇಜ್ ಇದ್ದರೂ ಅಲ್ಲಿ ಅಗತ್ಯ ವೈದ್ಯರು ಹಾಗೂ ದಾದಿಯರಿಲ್ಲ. ಅಲ್ಲಿ ಸಲಕರಣೆಗಳೂ ಇಲ್ಲ. ಇದರಿಂದ ಕುಮಟಾದಲ್ಲಿ ಅಪಘಾತ ತುರ್ತು ನಿರ್ವಹಣಾ ಕೇಂದ್ರ ಎಂದರೆ ಟ್ರಾಮಾ ಸೆಂಟರ್ ಪ್ರಾರಂಭಿಸಲಾಗಿದೆ. ಅಪಘಾತಗಳು ಸಂಭವಿಸಿದರೆ, ಕೊನೆಯ ಪಕ್ಷ ಪ್ರಾಥಮಿಕ ಚಿಕಿತ್ಸೆ ನೀಡಿ ಬೇರೆ ಉನ್ನತ ಆಸ್ಪತ್ರೆಗಳಿಗೆ ಕೊಂಡೊಯ್ಯೋಣ ಎಂಬ ಉದ್ದೇಶ ಹೊಂದಿದ್ದೆವು. ಆದರೆ, ಅದರ ಬಗ್ಗೆಯೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಅದಕ್ಕೆ ಅಗತ್ಯ ವೈದ್ಯರನ್ನು ಸರ್ಕಾರ ನೀಡಿಲ್ಲ ಎಂದು ದಿನಕರ ಶೆಟ್ಟಿ ಹೇಳಿದರು.

ಕೋಲ್ಡ್ ಸ್ಟೋರೇಜ್ ಬೇಕು:

ಕುಮಟಾ ತಾಲೂಕಿನಲ್ಲಿ ಬೆಳೆಯುವ ತರಕಾರಿ ಮತ್ತು ಕುಮಟಾ ತಾಲೂಕಿನಲ್ಲಿ ಮಾತ್ರ ಬೆಳೆಯುವ ಸಿಹಿ ಈರುಳ್ಳಿ ಸಂರಕ್ಷಣೆಗೆ ಶೈತ್ಯಾಗಾರದ ಅಗತ್ಯವಿದೆ. ಅದನ್ನು ಶೀಘ್ರ ಸ್ಥಾಪಿಸಬೇಕು ಎಂದು ಒತ್ತಾಯ ಮಾಡಿದರು. ಕುಮಟಾ ಮತ್ತು ಹೊನ್ನಾವರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಅಘನಾಶಿನಿ ನದಿಗೆ ಬ್ಯಾರೇಜ್ ನಿರ್ಮಿಸಿ 9 ಗ್ರಾಮ ಪಂಚಾಯಿತಿಗಳಿಗೆ ನೀರು ಒದಗಿಸಬಹುದಾದ 150 ಕೋಟಿ ರೂ.ಗಳ ಪ್ರಸ್ತಾವನೆಯೊಂದನ್ನು ಜಲ ಸಂಪನ್ಮೂಲ ಸಚಿವರಿಗೆ ಸಲ್ಲಿಸಿದ್ದೇನೆ ಅದಕ್ಕೆ ಅನುಮೋದನೆ ನೀಡಬೇಕು ಎಂದು ದಿನಕರ ಶೆಟ್ಟಿ ಒತ್ತಾಯಿಸಿದರು.

ಉತ್ತರ ಕನ್ನಡಕ್ಕೇ ಈ ನಿರ್ಲಕ್ಷ್ಯವೇಕೆ..?

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರ ಇದೆ. ಆದರೆ, ಸ್ಥಳೀಯರಿಗೆ ಸಣ್ಣ ನೌಕರಿಯೂ ಸಿಗುತ್ತಿಲ್ಲ. ಸೀಬರ್ಡ್ ನೌಕಾ ಯೋಜನೆಯಂಥ ಬೃಹತ್ ಯೋಜನೆಗಳಿಗೆ ಜನರು ತಮ್ಮ ಭೂಮಿಗಳನ್ನು ತ್ಯಾಗ ಮಾಡಿದ್ದಾರೆ. ಕೈಗಾ ಅಣು ಸ್ಥಾವರದಿಂದ ಉಂಟಾಗುತ್ತಿರುವ ಅನಾಹುತಗಳ ಬಗ್ಗೆ ನೀವು ತಿಳಿದುಕೊಂಡಿದ್ದೀರಿ ಎಂದುಕೊಂಡಿದ್ದೇನೆ.  ಆದರೆ, ಜಿಲ್ಲೆಯ ಜನರಿಗೆ ಸೌಲಭ್ಯ ಕೊಡಲು ಯಾವುದೇ ಸರ್ಕಾರವೂ ಗಮನ ಹರಿಸುತ್ತಿಲ್ಲ.

ಉತ್ತರ ಕನ್ನಡ ಯಾವ ಕರ್ನಾಟಕದಲ್ಲಿ ಬರುತ್ತದೆ ಎಂಬುದೇ ಸ್ಪಷ್ಟತೆ ಇಲ್ಲ. ಕಿತ್ತೂರು ಕರ್ನಾಟಕದಲ್ಲೂ, ಕರಾವಳಿ ಕರ್ನಾಟಕದಲ್ಲೂ ಉತ್ತರ ಕನ್ನಡದ ಹೆಸರಿಲ್ಲ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಉತ್ತರ ಕನ್ನಡ ವಿಸ್ತೀರ್ಣದಲ್ಲಿ ದೊಡ್ಡದಿದೆ. ಆದರೆ, ಅನುದಾನ ಮಾತ್ರ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಹರಿಯುತ್ತಿದೆ. ನಮ್ಮ ಜಿಲ್ಲೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ ಅವುಗಳನ್ನು ಬಗೆಹರಿಸುವ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ:https://www.vijayavani.net/bus-overturned-in-ankolaವಿಡಿಯೋ ವೀಕ್ಷಿಸಿ: https://www.youtube.com/watch?v=36Gby7exXYs

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net