

ಮಡಿಕೇರಿ: ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘ ಮತ್ತು ಹಾಲುಗುಂದ ಗ್ರಾಮಸ್ಥರು, ಭಗವತಿ ಯೂತ್ ಕ್ಲಬ್ ಹಾಲುಗುಂದ ಹಾಗೂ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಸಹಯೋಗದಲ್ಲಿ ಡಿ.೨೬ ರಿಂದ ೨೯ರವರೆಗೆ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ೭+೨ ಜನರ ಮುಕ್ತ ಫುಟ್ಬಾಲ್ ಪಂದ್ಯಾವಳಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಪಂದಿಕಂಡ ದಿನೇಶ್ ತಿಳಿಸಿದರು.
ಹಾಲುಗುಂದ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.೨೬ ರಂದು ಬೆಳಗ್ಗೆ ೧೦ ಗಂಟೆಗೆ ನಡೆಯುವ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನೆಯನ್ನು ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ, ಹಾಲುಗುಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಹಾಲುಗುಂದ ಗ್ರಾಮದ ತಕ್ಕಮುಖ್ಯಸ್ಥರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಡಿ.೨೮ ರಂದು ಬೆಳಗ್ಗೆ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ನಡೆಯಲಿದೆ. ವಾರ್ಷಿಕೋತ್ಸವದ ಉದ್ಘಾಟನೆಯನ್ನು ಬಿ.ಇ.ಓ ಪ್ರಕಾಶ್ ನೆರವೇರಿಸಲಿದ್ದಾರೆ. ಡಿ.೨೯ ರಂದು ಮಧ್ಯಾಹ್ನ ಮೂರು ಗಂಟೆಗೆ ಫೈನಲ್ ಪಂದ್ಯ ನಡೆಯಲಿದೆ. ಫೈನಲ್ ಪಂದ್ಯದ ಉದ್ಘಾಟನೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಮುಖ್ಯಮಂತ್ರಿರವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಸುಜಾಕುಶಾಲಪ್ಪ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಫೈನಲ್ ಪಂದ್ಯದ ಸಮಾರೋಪ ಸಮಾರಂಭದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಎಂ.ಎಲ್.ಸಿ ಸುಜಾಕುಶಾಲಪ್ಪ ಹಾಗೂ ಹಾಲುಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿ, ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಹಾಲುಗುಂದ ಗ್ರಾಮದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ವಿವರಿಸಿದರು.
ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಪಂದಿಕಂಡ ನಾಗೇಶ್ ಮಾತನಾಡಿ, ಅಸೋಸಿಯೇಷನ್‌ನಲ್ಲಿ ನೋಂದಣಿಗೊಂಡ ೧೮ ತಂಡಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪಂದ್ಯಾವಳಿಯು ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಹಾಗೂ ರಾಜ್ಯ ಫುಟ್ಬಾಲ್ ಸಂಸ್ಥೆಯ ನಿಯಮಾವಳಿಯಂತೆ ಪಂದ್ಯ ನಡೆಯಲಿದೆ. ಜಿಲ್ಲಾ ಫುಟ್ಬಾಲ್ ಸಂಸ್ಥೆ ಮತ್ತು ರಾಷ್ಟ್ರಮಟ್ಟದ ತೀರ್ಪುಗಾರರು ಪಂದ್ಯಾವಳಿಯನ್ನು ನಿಯಂತ್ರಿಸಲಿದ್ದು, ೭+೨ ಆಟಗಾರ ಪಂದ್ಯಾವಳಿಯಲ್ಲಿ ರೋಲಿಂಗ್ ಸಬ್ಸಿಟ್ಯೂಟ್ ಮಾಡಲು ಅವಕಾಶ ನೀಡಲಾಗಿದೆ. ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಬಹುದಾಗಿದೆ. ಪಂದ್ಯಾವಳಿಯು ೨೫+೨೫ ನಿಮಿಷಗಳಿಗೆ ಸೀಮಿತವಾಗಿದೆ ಎಂದು ಮಾಹಿತಿ ನೀಡಿದರು.
ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೪೦ ಸಾವಿರ ಹಾಗೂ ದ್ವಿತೀಯ ಸ್ಥಾನ ಪಡೆಯುವ ತಂಡಕ್ಕೆ ೩೦ ಸಾವಿರ ನಗದು, ಆಕರ್ಷಕ ಟ್ರೋಫಿ ಮತ್ತು ವೈಯಕ್ತಿಕ ಬಹುಮಾನ ನೀಡಲಾಗುವುದು. ಫೈನಲ್ ಪಂದ್ಯಕ್ಕೂ ಮೊದಲು ಲಯನ್ಸ್ ಸಂಸ್ಥೆಯ ವಿದ್ಯಾರ್ಥಿನಿಯರು ಹಾಗೂ ವೈಷ್ಣವಿ ಫುಟ್ಬಾಲ್ ಕ್ಲಬ್ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದ ಭಗವತಿ ಯೂತ್ ಕ್ಲಬ್ ಅಧ್ಯಕ್ಷ ಮಚ್ಚೆಟ್ಟೀರ ಮೋಹನ್ ಕಾರ್ಯಪ್ಪ, ಹಾಲಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮೇಕೇರಿರ ವಿಜಯ್, ಬೆಳೆಗಾರರಾದ ಚೆಯ್ಯಂಡ ಭರತ್ ಹಾಜರಿದ್ದರು.