ಸುಪಾರಿ ಹಂತಕನ ಬಂಧನ

arrested
Published on

ಬೆಂಗಳೂರು: ಮಾರಕಾಸ ಹಿಡಿದು ರೀಲ್ಸ್ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಜನರಲ್ಲಿ ಭಯ ಸೃಷ್ಟಿಸಿದ್ದ ಶಶಾಂಕ್ (೨೬) ಎಂಬ ಸುಪಾರಿ ಹಂತಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಶಾಂಕ್, ಮಾರಕಾಸಗಳನ್ನು ಹಿಡಿದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ. ಜನರಲ್ಲಿ ಭಯ ಸೃಷ್ಟಿಸುವ ಕಾರಣಕ್ಕೆ ಆರೋಪಿ ಈ ರೀತಿ ಮಾಡಿದ್ದ. ಶಶಾಂಕ್, ಜ.೨೦ ರಂದು ರಾತ್ರಿ ಮಾರಕಾಸ ಹಿಡಿದು ಪುಟ್ಟೇನಹಳ್ಳಿ ಕೆರೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಆತನನ್ನು ಬಂಧಿಸಲಾಯಿತು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧ ಹಿನ್ನೆಲೆಯುಳ್ಳ ಶಶಾಂಕ್ ವಿರುದ್ಧ ೨೦೧೫ರಲ್ಲಿ ಹುಳಿಮಾವು ಮತ್ತು ೨೦೧೯ರಲ್ಲಿ ಬನ್ನೇರುಘಟ್ಟ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದವು. ಆತ ಸುಪಾರಿ ಪಡೆದು ಇಬ್ಬರನ್ನು ಕೊಲೆ ಮಾಡಿದ್ದ. ಅಲ್ಲದೇ, ಆತನ ವಿರುದ್ಧ ರಾಜಾಜಿನಗರ ಮತ್ತು ತಿಲಕ್‌ನಗರ ಠಾಣೆಯಲ್ಲಿ ಕೊಲೆ ಯತ್ನ, ಪುಟ್ಟೇನಹಳ್ಳಿ ಠಾಣೆಯಲ್ಲಿ ಹಲ್ಲೆ ಹಾಗೂ ಅತ್ತಿಬೆಲೆ ಠಾಣೆಯಲ್ಲಿ ಅಪಹರಣ ಪ್ರಕರಣ ಸಹ ದಾಖಲಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಹರಣ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಶಶಾಂಕ್‌ನನ್ನು ಬಂಧಿಸಲು ಹೋಗಿದ್ದ ಪೊಲೀಸರ ಮೇಲೆಯೇ ಆತ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ. ಬಳಿಕ ಪೊಲೀಸರು ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಶಶಾಂಕ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿಯಿಂದ ಮಾರಕಾಸಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net