

ಕಾರವಾರ: ಕಾಳಿನದಿ ಯೋಜನೆ 1 ನೇ ಹಂತ ಸೂಪಾ ಆಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿರುವುದರಿಂದ ಸೂಪಾ ಆಣೆಕಟ್ಟೆಯ ಜಲಾಶಯದ ನೀರಿನ ಮಟ್ಟವು ಸತತವಾಗಿ ಏರುತ್ತಿದೆ. ಸೂಪಾ ಜಲಾಶಯದ ಗರಿಷ್ಠ ಮಟ್ಟವು 564 ಮೀಟರ ಆಗಿದ್ದು. ಸೂಪಾ ಜಲಾಶಯದ ನೀರಿನ ಸಂಗ್ರಹಣ ಸಾಮರ್ಥ್ಯವು 147.55 ಟಿ.ಎಂ.ಸಿ ಆಗಿರುತ್ತದೆ.
ಜಲಾಶಯದ ಇಂದಿನ ಮಟ್ಟವು ಬೆಳಗ್ಗೆ 8 ಗಂಟೆಗೆ 550.75 ಮೀಟರಗಳಾಗಿರುತ್ತದೆ ಹಾಗೂ 96.245 ಟಿ.ಎಂ.ಸಿ ಸಂಗ್ರಹಣವಾಗಿರುತ್ತದೆ. ಇದು ಜಲಾಶಯದ ಒಟ್ಟು ಸಾಮರ್ಥ್ಯದ 65.23% ಆಗಿರುತ್ತದೆ. ಈ ದಿನದ ಸೂಪಾ ಜಲಾಶಯದ ಒಳ ಹರಿವು ಸುಮಾರು 13,481 ಕ್ಯೂಸೆಕ್ಸ್ ಯಾಗಿದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳ ಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆಗಳಿರುವುದರಿಂದ ಆಣೆಕಟ್ಟು ಸುರಕ್ಷತಾ ದೃಷ್ಠಿಯಿಂದ ಹೆಚ್ಚುವರಿಯಾದ ಜಲಾಶಯದ ನೀರನ್ನು ಯಾವುದೇ ಸಮಯದಲ್ಲಿ ಹೊರ ಬಿಡಲಾಗುವುದು.
ಆದ್ದರಿಂದ ಆಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರು ಇತ್ಯಾದಿಗಳೊಂದಿಗೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತಗೊಳ್ಳಬೇಕೆAದು ಹಾಗೂ ಸೂಪಾ ಆಣೆಕಟ್ಟೆಯ ಕೆಳಭಾಗದ ನದಿ ಪಾತ್ರದಲ್ಲಿ ದೋಣಿ ಸಂಚಾರ, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಗಳನ್ನು ಮಳೆಗಾಲ ಮುಗಿಯುವರೆಗೂ ನಡೆಸದಂತೆ ಕಾರ್ಯನಿರ್ವಾಹಕ ಅಭಿಯಂತರರು(ಹಾ) ಸೂಪಾ ಕನಾಟಕ ವಿದ್ಯುತ್ ನಿಗಮ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.