

ಸುಂಟಿಕೊಪ್ಪ : ಯುವಜನರು ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕಿ ಹೇಳಿದರು.
ಸುಂಟಿಕೊಪ್ಪ ವಲಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಯುವಜನರು ದುಶ್ಚಟಗಳಿಗೆ ದಾಸರಾಗುವ ಮೂಲಕ ಆರೋಗ್ಯ ಮತ್ತು ಜೀವನವನ್ನು ಹಾಳುಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಸಣ್ಣ ವಯಸ್ಸಿನಲ್ಲೇ ತಂಬಾಕು ಸೇರಿದಂತೆ ಹಲವು ಚಟಗಳಿಗೆ ಆಕರ್ಷಿತರಾಗುವ ಹಲವು ಪ್ರಸಂಗಗಳನ್ನು ಕಾಣುತ್ತಿದ್ದೇವೆ. ಇಂಥ ವಿಷಮ ಕಾಲ ಘಟ್ಟದಲ್ಲಿ ಧ.ಗ್ರಾ.ಯೋಜನೆ ಹಲವೆಡೆ ಜಾಗೃತಿ ಕಾರ್ಯಕ್ರಮ ನಡೆಸುತ್ತಿದೆ. ಆರೋಗ್ಯ ಪಾಲನೆಗೆ ಅರಿವು ಮೂಡಿಸುತ್ತಿದೆ ಎಂದರು.
ಸುಂಟಿಕೊಪ್ಪ ಠಾಣೆಯ ಎಎಸ್‌ಐ ಸುರೇಶ್ ಮಾತನಾಡಿ, ಅಪ್ರಾಪ್ತ ಮಕ್ಕಳು ತಂಬಾಕು ಖರೀದಿಸುವುದು ಮತ್ತು ಅಂಥವರಿಗೆ ಅಂಗಡಿಯವರು ಮಾರಾಟ ಮಾಡುವುದು ಕಾನೂನು ರೀತಿಯ ಅಪರಾಧ. ದಂಡದೊಂದಿಗೆ ಜೈಲು ಶಿಕ್ಷೆಗೂ ಅವರು ಒಳಗಾಗಬಹುದಾಗಿದೆ ಆದ್ದರಿಂದ ಅಂಗಡಿಯವರು ತಂಬಾಕು ಸೇರಿದಂತೆ ಗುಟ್ಕಾ ಮತ್ತಿತರ ಮಾದಕ ಪದಾರ್ಥಗಳನ್ನು ಅಪ್ರಾಪ್ತರಿಗೆ ನೀಡಬಾರದು ಎಂದು ಹೇಳಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಜನಜಾಗೃತಿ ಸಂಸ್ಥೆ ಸದಸ್ಯರಾದ ಡಿ ನರಸಿಂಹ, ಸುಂಟಿಕೊಪ್ಪ ಪ್ರೌಢಶಾಲೆಯ ಸಹಶಿಕ್ಷಕಿ ಚಿತ್ರಾ,ಯೋಜನಾಧಿಕಾರಿ ಪುರುಷೋತ್ತಮ್, ಒಕ್ಕೂಟ ಅಧ್ಯಕ್ಷರಾದ ಲೀಲಾವತಿ, ಸೇವಾ ಪ್ರತಿನಿಧಿಗಳಾದ ಯಶೋದಾ, ನಂದಿನಿ, ವಲಯ ಮೇಲ್ವಿಚಾರಕ ಸಂತೋಷ್, ಶಿಕ್ಷಕ ಪ್ರಕಾಶ್ ಇದ್ದರು.