

ಸುಂಟಿಕೊಪ್ಪ : ನಕಾರಾತ್ಮಕ ಸಂಗತಿಗಳನ್ನು ದೂರ ಮಾಡಿ ಉತ್ತಮ ಗುಣಗಳನ್ನು ಅಳವಡಿಸಿಕೊಳ್ಳಲು ದಸರಾ ಮಹೋತ್ಸವ ಪ್ರೇರಣೆಯಾಗಬೇಕಿದೆ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವೇದಿಕೆ ಇತ್ತೀಚೆಗೆ ಆಯೋಜಿಸಿದ್ದ ದಸರಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವಾಹನ ಚಾಲಕರ ಸಂಘ ಸಮಾಜಮುಖಿ ಮತ್ತು ಸಂಸ್ಕೃತಿ ಬೆಳೆಸುವ ಚಟುವಟಿಕೆ ಮಾಡುತ್ತಿರುವುದು ಶ್ಲಾಘನೀಯ. ಕಾಲಕಾಲಕ್ಕೆ ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ವೇದಿಕೆಯೂ ಆಗಿರುವುದು ಸಂಘದ ಹಿರಿಮೆ ಎಂದರು.
ಪಕ್ಷಾತೀತ ಕಾರ್ಯಕ್ರಮ: ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಸುಂಟಿಕೊಪ್ಪ ವಾಹನ ಚಾಲಕರ ಸಂಘ ಪಕ್ಷಾತೀತ ನೆಲೆಗಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಜನರ ಮೆಚ್ಚುಗೆಗೆ ಪಾತ್ರವಾಗುವ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದರು. ಸ್ಥಳೀಯ ಪ್ರತಿಭೆಗಳ ವಿಕಸನಕ್ಕೆ ವೇದಿಕೆ ಒದಗಿಸಿಕೊಟ್ಟಿರುವುದು ಅತ್ಯಂತ ಶ್ಲಾಘನೀಯ ಎಂದರು. ವಿಜಯದಶಮಿ ಆಚರಣೆ ಮಹಾಭಾರತ ಕಾಲದಿಂದಲೂ ಇದೆ. ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವ ಸಂದೇಶವನ್ನು ಈ ಹಬ್ಬದ ಆಚರಣೆ ಹೊಂದಿರುವುದನ್ನು ಅರಿತು ಬಾಳಬೇಕು ಎಂದರು.
ನಿವೇಶನ ನೀಡಿ: ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ ಮಾತನಾಡಿ, ವಾಹನ ಚಾಲಕರ ಜೀವನ ದುಸ್ತರವಾಗಿದೆ. ಅವರಿಗೆ ನಿವೇಶನ ನೀಡುವ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ನೀಡಲಾಗಿದೆ. ಚುನಾಯಿತ ಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕು ಎಂದರು. ವಾಹನಗಳಿಗೆ ನಂಬರ್ ಪ್ಲೇಟ್ ಹಾಕಿಸುವ ನಿಯಮಗಳು ಚಾಲಕರಿಗೆ ಸಮಸ್ಯೆಯಾಗಿದೆ. ಸಾರಿಗೆ ಪ್ರಾಧಿಕಾರದ ಕಾನೂನುಗಳ ಬಗ್ಗೆ ಜಿಲ್ಲಾಡಳಿತ ಮತ್ತು ಸರ್ಕಾರ ಅವಲೋಕನ ಮಾಡಿ ಮಧ್ಯಮವರ್ಗದ ಚಾಲಕರಿಗೆ ಸ್ಪಂದಿಸಬೇಕೆಂದು ಎಂದು ಮನವಿ ಮಾಡಿದರು.
ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಮಾತನಾಡಿ, ನವರಾತ್ರಿ ಆಚರಣೆಯ ಇತಿಹಾಸ, ಮಹತ್ವ ವಿವರಿಸಿದರು. ಜಿಪಂ ಮಾಜಿ ಸದಸ್ಯ ಪಿ.ಎಂ.ಲತೀಫ್, ಗ್ರಾ.ಪಂ.ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಮಾತನಾಡಿದರು. ಯುವ ಮುಖಂಡರಾದ ಪಿ.ಎಲ್.ಹರ್ಷದ್, ಅನೂಪ್ ಕುಮಾರ್, ಗ್ರಾಪಂ ಸದಸ್ಯ ಪಿ.ಎಫ್. ಸೆಬಾಸ್ಟಿನ್, ಕೃಷಿಕ ರಾಮಣ್ಣ, ವಾಹನ ಚಾಲಕರ ಸಂಘದ ಅಧ್ಯಕ್ಷ ಕೆ.ವಿ.ಕಿಟ್ಟಣ್ಣ ರೈ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ:
ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಷ್ರೂಷಕಿ ಚಿತ್ರಕುಮಾರಿ, ಆಶಾ ಕಾರ್ಯಕರ್ತೆ ಪಾರ್ವತಿ, ಹಿರಿಯ ಚಾಲಕ ಉಸ್ಮಾನ್, ನಿವೃತ್ತ ಯೋಧ ವಿಲಿಯಂ ಮೇನೆಜಸ್ ಅವರನನು ಸನ್ಮಾನಿಸಲಾಯಿತು. ಉತ್ತಮ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದ ವಿವಿಧ ಅಂಗಡಿ, ಮಳಿಗೆ, ಆಟೋರಿಕ್ಷಾ ಮತ್ತು ವಾಹನಗಳ ಮಾಲೀಕರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳ ನೃತ್ಯಮೇಳ ರಂಜಿಸಿತು.