

ಮಡಿಕೇರಿ: ಮಂಜಿನ ನಗರಿಯಲ್ಲಿ ಬಿಸಿಲು ಏರುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.
ಹೌದು.. ಮಡಿಕೇರಿ ನಗರಕ್ಕೆ ಕುಡಿಯುವ ನೀರು ಸರಬರಾಜು ಕಳೆದ ಎರಡು ದಿನಗಳಿಂದ ಕಡಿಮೆಯಾಗಿದೆ. ಕೂಟುಹೊಳೆ, ರೋಷನಾರ ಕೆರೆ, ಕನ್ನಂಡಬಾಣೆ ಹಾಗೂ ಕುಂಡಾಮೇಸ್ತ್ರಿಯಿಂದ ನೀರು ಸರಬರಾಜಾಗುತ್ತದೆ. ೪ ಪಂಪ್‌ಹೌಸ್‌ಗಳಿಂದ ನೀರು ಸಂಗ್ರಹಿಸಿ ಪ್ರತಿ ದಿನ ನಗರದ ೨೩ ವಾರ್ಡ್‌ಳಿಗೆ ಪೂರೈಸಲಾಗುತ್ತಿತ್ತು. ಆದರೆ, ಬಿಸಿಲಿನ ತಾಪ ಹಾಗೂ ಮಳೆ ಬಾರದೆ ಪರಿಣಾಮ ರೋಷನಾರ ಕೆರೆ ಮತ್ತು ಕೂಟುಹೊಳೆಯಲ್ಲಿ ನೀರು ಬತ್ತಿ ಹೋಗಿದೆ. ಪರಿಣಾಮ ನೀರಿನ ಅಭಾವ ಉಂಟಾಗಿದೆ.
೨ ದಿನಕ್ಕೊಮ್ಮೆ ನೀರು: ಸಮಸ್ಯೆಯ ಗಂಭೀರತೆ ಅರಿತ ನಗರಸಭೆ ಪೌರಾಯುಕ್ತ ವಿಜಯ್, ಕೂಟುಹೊಳೆಗೆ ಭೇಟಿ ನೀಡಿ ವೀಕ್ಷಿಸಿದ್ದಾರೆ. ನಗರಸಭೆಯ ಸಹಾಯಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಭಿಯಂತರರು ಹಾಗೂ ಸೀನಿಯರ್ ವಾಲ್ಮನ್‌ಗಳೊಂದಿಗೆ ಕೂಟುಹೊಳೆ ಹಾಗೂ ಕುಂಡಮೇಸ್ತ್ರಿ ಜಾಕ್‌ವೆಲ್ ಪರಿಶೀಲಿಸಿದ್ದಾರೆ. ನೀರಿನ ಕೊರತೆಯನ್ನು ಮನಗಂಡು ೨ ದಿನಕ್ಕೊಮ್ಮೆ ನೀರು ಪೂರೈಸುವ ನಿರ್ಧಾರವನ್ನು ನಗರಸಭೆ ತೆಗೆದುಕೊಂಡಿದೆ. ನಗರದ ವಾರ್ಡ್‌ಗಳನ್ನು ವಿಂಗಡಿಸಿ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲು ನಿರ್ಧರಿಸಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಪ್ರತಿ ದಿನ ನೀರು ಸರಬರಾಜು ಇರುವುದಿಲ್ಲ ಎಂದು ತಿಳಿಸಿದೆ.
ಜನರು ಎಚ್ಚರ ವಹಿಸಿಬೇಕು: ಕೂಟುಹೊಳೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋದ ಪರಿಣಾಮ ಕುಂಡಮೇಸ್ತಿಯಿಂದ ಲಿಫ್ಟ್ ಮಾಡಿ ಕೂಟುಹೊಳೆಯಿಂದ ನಗರಕ್ಕೆ ನೀರನ್ನು ಒದಗಿಸಲಾಗುತ್ತಿದೆ. ವಾಹನಗಳ ಸ್ವಚ್ಛತೆ, ಕೈತೋಟ, ಕಟ್ಟಡ ಕಾಮಗಾರಿ ಹೀಗೆ ನಾನಾ ಕಾರಣಗಳಿಂದ ನೀರಿನ ಬಳಕೆ ಹೆಚ್ಚಿರುವುದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಪರಿಣಾಮ ಜನರು ಎಚ್ಚರ ವಹಿಸುವಂತೆ ನಗರಸಭೆ ಸೂಚಿಸಿದೆ.
೩೪ ಡಿಗ್ರಿ ಗರಿಷ್ಠ ತಾಪಮಾನ: ಮಾರ್ಚ್ ಅಂತ್ಯದಲ್ಲಿ ಜಿಲ್ಲೆಯಲ್ಲಿ ೩೪ ಡಿಗ್ರಿ ಗರಿಷ್ಠ ತಾಪಮಾನ ದಾಖಲಾಗಿದೆ. ಹೀಗಾಗಿ ನೀರಿನ ನದಿಮೂಲಗಳಲ್ಲಿ ನೀರು ಬತ್ತಿದ್ದು, ಜಿಲ್ಲೆಯ ಹಲವು ಭಾಗಗಳಲ್ಲಿ ಈಗಾಗಲೇ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ. ಬಿಸಿಲಿನ ತಾಪದಿಂದ ನದಿಗಳಲ್ಲಿ ನೀರಿನ ಹರಿವು ಗಣನಿಯವಾಗಿ ಇಳಿಕೆಯಾಗಿದೆ. ಕಾವೇರಿ, ಲಕ್ಷ್ಮಣ ತೀರ್ಥ, ಬೇತ್ರಿಯಲ್ಲಿ ನೀರಿನ ಮೂಲಗಳು ಬತ್ತಿವೆ. ಇದರೊಂದಿಗೆ ಅಲ್ಲಲ್ಲಿ ಮೋಟಾರ್ ಅಳವಡಿಸಿ ತೋಟಗಳಿಗೆ ನೀರು ಹರಿಸುವುದು ಕಂಡುಬಂದಿದ್ದು, ಇದರಿಂದಲೂ ನದಿ ನೀರು ಬತ್ತುತ್ತಿದೆ.
ಹೆಚ್ಚಿದ ಬಿಸಿಲಿನ ಸಮಯ: ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಿಸಿಲಿನ ಪ್ರಮಾಣ ಹೆಚ್ಚಾಗಿದ್ದು, ದಿನದಲ್ಲಿ ಸರಾಸರಿ ೧೧ ಗಂಟೆಗಳ ಕಾಲ ಬಿಸಿಲಿನಿಂದ ಕೂಡಿದೆ. ಸಾಮಾನ್ಯವಾಗಿ ಕೊಡಗಿನಲ್ಲಿ ಬೇಸಿಗೆಯಲ್ಲಿ ೧೦ ಗಂಟೆ ಅಥವಾ ಅದಕ್ಕೂ ಕಡಿಮೆ ಸಮಯ ಬಿಸಿಲು ಕಾಣಿಸಿಕೊಳ್ಳುತ್ತಿತ್ತು. ಇದು ಈ ವರ್ಷ ೧ ಗಂಟೆಯಷ್ಟು ಹೆಚ್ಚಾಗಿದೆ. ಇದರಿಂದ ಜಿಲ್ಲೆಯಲ್ಲಿ ಒಣ ಹವಾಮಾನವಿದ್ದು, ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಇದು ನೀರಿನ ಮೂಲಗಳು ಬತ್ತಲು ಪ್ರಮುಖ ಕಾರಣವಾಗಿದೆ.