

ರಾಯಚೂರು ಹಿಂದೂ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಗಣೇಶ ಚೌತಿಯನ್ನು ಪ್ರತಿ ವರ್ಷದಂತೆ ಅದ್ಧೂರಿಯಾಗಿ ನಡೆಸಲು ನಗರ ಸೇರಿದಂತೆ ಜಿಲ್ಲಾಧ್ಯಂತ ಗಜಾನನ ಸೇವಾ ಸಮಿತಿಗಳು ಅದ್ದೂರು ತಯಾರಿಗಳು ನಡೆಸಿದ್ದು, ಈ ಬಾರಿ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಕೂಡ ಬಂದಿದೆ.
ಜಿಲ್ಲೆಯಲ್ಲಿ ಈ ಬಾರಿ ಪಿಒಪಿ ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಹೊರಗಡೆಯಿಂದ ತರುವುದಕ್ಕೆ ಕಡಿವಾಣ ಹಾಕುವ ಅಧಿಕಾರಿಗಳ ಪ್ರಯತ್ನಕ್ಕೆ ಕೆಲವು ಕಡೆ ಮನ್ನಣೆ ಸಿಕ್ಕಿಲ್ಲ ಎನ್ನುವುದರ ಮಧ್ಯೆಯೂ ಮಣ್ಣಿನ ಗಣೇಶ ಮೂರ್ತಿಗಳ ತಯಾರಿಕೆ ಸಮಾಧಾನ ತಂದಿದೆ. ಈಗಾಗಲೇ ಜಿಲ್ಲಾಡಳಿತ, ಮಹಾನಗರ ಪಾಲಿಕೆಯವರು ಪಿಒಪಿ ಗಣೇಶ ಮಾರಾಟ ಮಾಡಬಾರದು, ಪ್ರತಿಷ್ಠಾಪಿಸಬಾರದು ಎಂಬ ಆದೇಶ, ಎಚ್ಚರಿಕೆಯ ಸಂದೇಶಗಳು ರವಾನಿಸಿದರೂ ಪಿಒಪಿ ಗಣೇಶ ಮೂರ್ತಿಗಳ ತಯಾರಿಸಿ ಮಾರಾಟ ಮಾಡುತ್ತಿರುವುದು ನಡೆದಿದೆ.
ಪರಿಸರ ಸ್ನೇಹಿ ಮೂರ್ತಿಗಳು
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಮೂರ್ತಿಗಳಿಗೆ ಈ ಬಾರಿಯು ಸರ್ಕಾರ ನಿಷೇಧ ಹೇರಿದ ಹಿನ್ನೆಲೆ ಕಲಾವಿದರು ಭತ್ತದ ಹುಲ್ಲು, ಬಿದಿರು, ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿ ಪರಿಸರ ಸ್ನೇಹಿ ಬೃಹತ್ ಗಣೇಶ ಮೂರ್ತಿಗಳನ್ನು ತಯಾರಿಸುವಲ್ಲಿ ನಿರತವಾಗಿದ್ದು ದೊಡ್ಡ ಮೂರ್ತಿಗಳ ತಯಾರಿಕೆ ಸಾಧ್ಯವಿಲ್ಲ. ಆದರೆ, ಸುಮಾರು 2ರಿಂದ 4 ಅಡಿ ಎತ್ತರದ ಮೂರ್ತಿಗಳ ನಿರ್ಮಿಸಲು ಸಾಧ್ಯ ಹೀಗಾಗಿ ಬೃಹತ್ ಗಾತ್ರದ ಗಣೇಶ ಮೂರ್ತಿಗಳ ತಯಾರಿಸುವ ಬೇಡಿಕೆ ಹೆಚ್ಚಿದ್ದರಿಂದ ಸಾಧ್ಯವಾಗಿಲ್ಲ. ಇದರಿಂದ ಹೊರಗಡೆಯಿಂದಲೂ ದೊಡ್ಡ ಗಾತ್ರದ ಗಣೇಶ ಮೂರ್ತಿಗಳ ತಂದು ಕೂರಿಸಲು ಕೆಲ ಗಜಾನನ ಸಮಿತಿಗಳು ಮುಂದಾಗಿವೆ. ಇದರಿಂದ ಈ ಹಿಂದೆ ಸ್ಥಳೀಯವಾಗಿ ಪಿಒಪಿ ಗಣೇಶ ಮೂರ್ತಿ ತಯಾರಿಸುತ್ತಿದ್ದ ಕಲಾವಿದರಿಗೆ ಆರ್ಥಿಕ ನಷ್ಟವಾಗಿದೆ ಎಂಬ ಬೇಸರ ಮನೆ ಮಾಡಿದೆ.
ಹೊರ ರಾಜ್ಯದಿಂದ ಗಣೇಶ ಮೂರ್ತಿ
ಜಿಲ್ಲೆಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ನಿಷೇಧ ಮಾಡಿದ ಹಿನ್ನಲೆಯಲ್ಲಿ 2 ರಿಂದ 5 ಲಕ್ಷ ರೂ.ಮೊತ್ತದ ಬೃಹತ್ ಮಟ್ಟದ ಗಣೇಶ ಮೂರ್ತಿಗಳನ್ನು ಹಿಂದೂ ಪರ ಸಂಘಟನೆಗಳು ಖರೀದಿ ಮಾಡಿದ್ದು, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯಗಳಿಂದ ಕೆಲ ಗಜಾನನ ಸಮಿತಿಯವರು ಪಿಒಪಿ ಗಣೇಶ ಮೂರ್ತಿಗಳನ್ನೆ ಆಮದು ಮಾಡಿಕೊಳ್ಳುತ್ತಿದ್ದು ನಮಗೆ ಮಾತ್ರ ಮಣ್ಣಿನ ಗಣಪತಿ ಮಾಡಿ ಮಾರಾಟ ಮಾಡಿ ಪಿಒಪಿಯಿಂದ ಮಾಡಿದರೆ ಕ್ರಮ ವಹಿಸುತ್ತೇವೆ ದಂಡ ಹಾಕುತ್ತೇವೆ ಎಂದು ಹೇಳುತ್ತಿದ್ದಾರೆ ಎಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಎಷ್ಟು ಗಣೇಶ ಮೂರ್ತಿಗಳ ಸ್ಥಾಪನೆ
ವರ್ಷದಿಂದ ವರ್ಷಕ್ಕೆ ಗಣೇಶ ಹಬ್ಬವನ್ನು ಗಜಾನನ ಯುವಕ ಮಂಡಳಿಯವರು ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಣೆ ಮಾಡುತ್ತಿದ್ದು, ಆಚರಣೆಗೆ ಯಾವುದೇ ಷರತ್ತುಗಳು ಇಲ್ಲದಿರುವುದರಿಂದ ಜಿಲ್ಲಾದ್ಯಂತ ಸುಮಾರು 4000ಕ್ಕೂ ಅಧಿಕ ಗಣೇಶ ಮೂರ್ತಿಗಳ ಸ್ಥಾಪನೆಗೆ ಅನುಮತಿ ದೊರಕಿದ್ದು, ಇದರಲ್ಲಿ 1000 ಕ್ಕೂ ಅಧಿಕವಾಗಿ ರಾಯಚೂರು ನಗರದಲ್ಲಿ ಕೂಡಿಸಲು ಅನುಮತಿ ನೀಡಲಾಗುತ್ತದೆ.
ಪಾಲಿಕೆಯಿಂದ ಜಾಗೃತಿ
ಗಣೇಶ ಹಬ್ಬದ ನಿಮಿತ್ತ ಮಹಾನಗರ ಪಾಲಿಕೆಯಿಂದ ಕಳೆದ 15 ದಿನಗಳಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲು ಜಾಗೃತಿ ಮೂಡಿಸಲಾಗಿದ್ದು, 5.7.9.11ನೇ ದಿನಕ್ಕೆ ಸಾಕಷ್ಟು ಕಸವು ನಗರದ ಕಸಬಾವಿಯಲ್ಲಿ ಬೀಳಬಹುದು ಅದರಿಂದ ಗಣೇಶನ ವಿಸರ್ಜನೆ ಅಷ್ಟೇ ಬಾವಿಗೆ ಆಗಬೇಕು. ತ್ಯಾಜ್ಯ ಸೂಕ್ತ ರೀತಿಯಲ್ಲಿ ಮನೆಯಲ್ಲೇ ಎತ್ತಿಟ್ಟು ನಂತರ ವಿಲೇವಾರಿ ಮಾಡಬೇಕೆಂದು ಸಲಹೆ ಮಹಾನಗರ ಪಾಲಿಕೆ ಅಗತ್ಯ ಕ್ರಮ ಕೈಗೊಂಡಿದ್ದು, ಗಣೇಶ ವಿಸರ್ಜನೆ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಗಣೇಶ ಮಿತ್ರ ಮಂಡಳಿಯವರು ಕಸವನ್ನು ಬಾವಿಯಲ್ಲಿ ಹಾಕದಿರಲು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಿಂದ ಖಾಸಬಾವಿ ಸುತ್ತಲೂ ಸಿಸಿ ಕ್ಯಾಮರಾ,ತಂತಿ ಬೇಲಿ ಸೇರಿದಂತೆ ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ನಗರದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಸೂಕ್ತ ಬಂದೋಬಸ್ತ್
ಭಾವೈಕತೆಯಿಂದ ಕೂಡಿದ ಗಣೇಶ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗೃತೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗಣೇಶ ಹಬ್ಬದ ಅಂಗವಾಗಿ ಒಂದು ತಂಡವನ್ನು ರಚನೆ ಮಾಡಿದ್ದು ಇದರಲ್ಲಿ ಇಬ್ಬರು ಎಎಸ್ಪಿ, ಡಿವೈಎಸ್ಪಿ, ಸಿಪಿಐ, ಪಿಎಸ್‌ಐ ಒಳಗೊಂಡಂತೆ ನೂರರು ಪೊಲೀಸ್ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ನೇಮಿಸಲಾಗಿದೆ.
ಗಣೇಶ ಹಬ್ಬವನ್ನು ಶಾಂತಿ ರೀತಿಯಲ್ಲಿ ಆಚರಣೆ ಮಾಡಲು ಜಿಲ್ಲಾಧ್ಯಂತ ಎಲ್ಲ ಠಾಣೆಗಳ ವ್ಯಾಪ್ತಿಯಲ್ಲಿ ಶಾಂತಿ ಸಭೆಗಳನ್ನು ಮಾಡಲಾಗಿದೆ. ಆತಂಕ ಸೃಷ್ಠಿಸುವ ವ್ಯಕ್ತಿಗಳನ್ನು ಗಡಿ ಪಾರು ಮಾಡಲು ಸಿದ್ದತೆ ಮಾಡಿಕೊಂಡಿದ್ದು, ಡಿಜೆಗಳನ್ನು ನಿಷೇದ ಮಾಡಲಾಗಿದೆ. ಒಂದು ವೇಳೆ ಡಿಜೆ ಬಳಕೆ ಮಾಡಿದರೆ ಪ್ರಕರಣ ದಾಖಲು ಮಾಡಲಾಗುತ್ತದೆ. ಎಂ.ಪುಟ್ಟ ಮಾದಯ್ಯ ಎಸ್ಪಿ ರಾಯಚೂರು.