ರಣ ಬಿಸಿಲಿಗೆ ಜನ ಹೈರಾಣ

dvg temp
Published on

ಗಣೇಶ್ ಕಮ್ಲಾಪುರ, ದಾವಣಗೆರೆ
ಜಿಲ್ಲೆಯಲ್ಲಿ 35-38 ಡಿಗ್ರಿ ಉಷ್ಣಾಂಶದ ಆಸುಪಾಸಿನಲ್ಲಿರುತ್ತಿದ್ದ ತಾಪಮಾನ ಈ ಬಾರಿ 40 ರ ಗಡಿ ದಾಟಿದೆ. ಬೆಳಗಾದರೆ ಸಾಕು ನೆತ್ತಿ ಸುಡುವ ಬಿಸಿಲಿನ ಪ್ರಖರತೆ ತಾಳದೆ ಜನ ಹೈರಾಣಾಗುತ್ತಿದ್ದಾರೆ.

ದಾವಣಗೆರೆಯಲ್ಲಿ 2016ರ ಏಪ್ರಿಲ್ 27 ರಂದು 40.5 ಡಿಗ್ರಿ ಉಷ್ಣಾಂಶ ದಾಖಲಾಗಿದ್ದು ಬಿಟ್ಟರೆ ಮತ್ತೆಂದೂ 39 ಡಿಗ್ರಿ ಉಷ್ಣಾಂಶ ದಾಟಿದ ದಾಖಲೆಗಳಿಲ್ಲ. ಆದರೆ, ಈ ಬಾರಿ ಮಾರ್ಚ್ ಮಾಸಾಂತ್ಯದಲ್ಲೇ 40 ಡಿಗ್ರಿ ತಾಪಮಾನ ದಾಖಲಾಗಿದೆ.

ಏಪ್ರಿಲ್ 3 ರಂದು 39 ಡಿಗ್ರಿ ಉಷ್ಣಾಂಶವಿದ್ದರೆ, ಏ.4 ರ ಗುರುವಾರ 41 ಡಿಗ್ರಿ, ಶುಕ್ರವಾರ 40 ಡಿಗ್ರಿ, ಶನಿವಾರ ಹಾಗೂ ಭಾನುವಾರ 40 ಡಿಗ್ರಿ ಹಾಗೂ ಏ.8,9ರಂದು 41 ಡಿಗ್ರಿ ಉಷ್ಣಾಂಶ ಇರಲಿದೆ. ಏಪ್ರಿಲ್ ಅಂತ್ಯದ ವೇಳೆಗೆ ಮತ್ತಷ್ಟು ತಾಪಮಾನ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತದೆ ಹವಾಮಾನ ಇಲಾಖೆ ವರದಿ.

ಬಿಸಿಲಿಗೆ ಪ್ರಸಿದ್ಧವಾದ ನೆರೆಯ ಚಿತ್ರದುರ್ಗ ಜಿಲ್ಲೆಗಿಂತಲೂ ಎರಡ್ಮೂರು ಡಿಗ್ರಿ ಉಷ್ಣಾಂಶ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮುಂದಿನ ದಿನಗಳ ಬಗ್ಗೆ ಜನ ಭೀತರಾಗಿದ್ದಾರೆ. ಮನೆಯಲ್ಲಿ ದಿನ ಕಳೆಯಲು ಆಗುತ್ತಿಲ್ಲ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಎಸಿ, ಫ್ಯಾನ್‌ಗಳ ಬಳಕೆಯಾಗುತ್ತಿಲ್ಲ.

ಎಸಿ, ಕೂಲರ್, ಫ್ಯಾನ್‌ಗಳಿಗೆ ಡಿಮಾಂಡ್:
ಮನೆಯಲ್ಲಿದ್ದರೂ ಬೇಸಿಗೆ ಬಿಸಿ ತಡೆದುಕೊಳ್ಳಲಾಗುತ್ತಿಲ್ಲ. ಫ್ಯಾನ್, ಎಸಿ, ಕೂಲರ್‌ಗಳಿರದಿದ್ದರೆ ನೆಮ್ಮದಿ ಅಸಾಧ್ಯವಾಗಿದೆ. ಹಾಗಾಗಿ, ಜನರು ದೇಹಕ್ಕೆ ತಂಪು ನೀಡುವ ಎಸಿ, ಕೂಲರ್, ಫ್ಯಾನ್‌ಗಳ ಖರೀದಿಗೆ ಮುಗಿಬಿದ್ದಿದ್ದಾರೆ.

25ರಿಂದ 28 ಸಾವಿರ ರೂ.ಗೆ ದೊರೆಯುತ್ತಿದ್ದ ಪ್ರತಿಷ್ಠಿತ ಕಂಪನಿಗಳ ಎಸಿ ಇದೀಗ 32 ರಿಂದ 35 ಸಾವಿರ ರೂ.ಗಳಿಗೆ ಜಿಗಿದಿದೆ. 3,800 ರಿಂದ 4 ಸಾವಿರವಿದ್ದ 17 ಲೀಟರ್ ಸಾಮರ್ಥ್ಯದ ಕೂಲರ್ ದರ ಇದೀಗ 4300-4500 ರೂ. ಹೆಚ್ಚಳವಾಗಿದೆ. ಅದೇರೀತಿ, ಫ್ಯಾನ್‌ಗಳು ಸಹ 200 ರೂ.ನಿಂದ 400 ರೂ.ಗೆ ಏರಿಕೆಯಾಗಿವೆ.

ಕಳೆದೆರೆಡು ತಿಂಗಳ ಹಿಂದೆ ಮಾರುಕಟ್ಟೆಯಲ್ಲಿ ಏರ್‌ಕೂಲರ್‌ಗಳ ದರ ಕಡಿಮೆ ಇತ್ತು. ಆದರೆ, ಬೇಸಿಗೆ ಹೆಚ್ಚಾದಂತೆ ಉತ್ಪನ್ನದ ವೆಚ್ಚ, ಏರ್‌ಕೂಲರ್‌ಗಳ ಬಿಡಿಭಾಗಗಳ ದರವೂ ಹೆಚ್ಚಾಗಿರುವುದರಿಂದ ಗ್ರಾಹಕರು ಅಧಿಕ ಹಣ ನೀಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಹರಿಹರದ ಎಲೆಕ್ಟ್ರಾನಿಕ್ ಅಂಗಡಿ ಮಾಲೀಕ ಕೆ.ಎಂ. ಲೋಹಿತ್.


ಬಿಸಿಲಿನಿಂದ ರಕ್ಷಣೆ ಹೇಗೆ?
ಛತ್ರಿ, ಮುಖಗವಸು, ತೆಳುವಾದ ಹತ್ತಿ ಬಟ್ಟೆ, ಟೋಪಿ ಧರಿಸಿ ಓಡಾಡಿ
ದ್ರವ ರೂಪದ ಆಹಾರ, ನೀರಿನಾಂಶವುಳ್ಳ ತರಕಾರಿ, ಹಣ್ಣು ಹಂಪಲು ಸೇವಿಸಿ
ಕೆಲಸಗಳನ್ನು ಬೆಳಗ್ಗೆ ಸಂಜೆ ವೇಳೆ ಮಾಡಿಕೊಳ್ಳುವುದು ಒಳಿತು.
ಮಧ್ಯಾನ್ನದ ವೇಳೆ ಬಿಸಿಲಿಗೆ ಮೈಯೊಡ್ಡದಂತೆ ಇರಿ
ದಿನಕ್ಕೆರಡು ಬಾರಿ ಉಗುರು ಬೆಚ್ಚಗಿನ ಅಥವಾ ತಣ್ಣೀರಿನ ಸ್ನಾನ ಉತ್ತಮ.
ಹೆಚ್ಚೆಚ್ಚು ನೀರು ಕುಡಿಯುವುದು
ಅತಿಯಾದ ತಂಪು ಪಾನೀಯ ಬಳಕೆ ಸರಿಯಲ್ಲ.

ಅಪಾಯದ ಚಿಹ್ನೆಗಳು
ಅತಿಯಾದ ತಲೆನೋವು, ಪ್ರಜ್ಞೆ ತಪ್ಪುವುದು, ತಲೆ ಸುತ್ತುವಿಕೆ, ಆಹಾರ ಸೇವಿಸಲು ನಿರಾಸಕ್ತಿ, ದೇಹದಲ್ಲಿ ಸುಸ್ತು, ಬಾಯಿ, ಒಣಗುವಿಕೆ, ಮೂರ್ಛೆ ಹೋಗುವುದು, ಅಲಸ್ಯ, ವಾಕರಿಕೆ, ವಾಂತಿ ಕಂಡುಬಂದಲ್ಲಿ ಹತ್ತಿರದ ವೈದ್ಯರನ್ನು ಸಂಪರ್ಕಿಸುವುದು ಒಳಿತು.

ವಾರದ ತಾಪಮಾನ
ಏ. 3ಕ್ಕೆ 39 ಡಿಗ್ರಿ ಉಷ್ಣಾಂಶ
ಏ.4ಕ್ಕೆ 41
ಏ.5ಕ್ಕೆ 40
ಏ.6ಕ್ಕೆ 40
ಏ.7ಕ್ಕೆ 40
ಏ.8ಕ್ಕೆ 41
ಏ.9ಕ್ಕೆ 41
ಏ.10ಕ್ಕೆ 38 ಡಿಗ್ರಿ ಉಷ್ಣಾಂಶ.

ಮನುಷ್ಯನ ದೇಹದ ವಿಟಮಿನ್ ಡಿ ವೃದ್ಧಿಗೆ ಸೂರ್ಯನ ಕಿರಣಗಳು ಸಹಕಾರಿ. ಆದರೆ, ಪ್ರಸ್ತುತ ಇರುವ ರಣಬಿಸಿಲಿನಿಂದ ಅಪಾಯಗಳೇ ಹೆಚ್ಚು. ಅದರಲ್ಲೂ ಕಾಯಿಲೆ ಇರುವವರು, ವೃದ್ಧರು, ಮಕ್ಕಳು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರದಿರುವುದೇ ಲೇಸು. ಬಿಸಿಲು, ಕಲುಷಿತ ನೀರು ಸೇವನೆಯಿಂದ ಮಕ್ಕಳಲ್ಲಿ ಸುಸ್ತು, ಪ್ರಜ್ಞೆ ತಪ್ಪುವಿಕೆ, ವಾಂತಿ, ಭೇದಿ ಪ್ರಕರಣಗಳು ಹೆಚ್ಚಾಗುತ್ತಿವೆ.
- ಡಾ.ಎ. ಸವಿತಾ, ವೈದ್ಯರು, ಸಾರ್ವಜನಿಕ ಆಸ್ಪತ್ರೆ, ಹರಿಹರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net