

Vijayaratna Award 2025 : ತಂದೆ ಶಾಸಕರಾಗಿದ್ದಾರೆ ಎಂಬ ಅಹಂ ಇಲ್ಲದೆ ಸ್ವಂತ ಶಕ್ತಿಯ ಮೇಲೆ ಮಾಲೂರು ಕ್ಷೇತ್ರದಲ್ಲಿ ಯುವಶಕ್ತಿ ಪಡೆಯನ್ನು ಕಟ್ಟಿ ಕರೊನಾ ಕಾಲದಲ್ಲಿ ಸಮಾಜಸೇವೆ ಸೇರಿ ವಿದ್ಯಾರ್ಥಿಗಳ ಓದಿಗೆ, ಉನ್ನತ ಶಿಕ್ಷಣಕ್ಕೆ ಸಹಾಯ, ಲ್ಯಾಪ್ಟಾಪ್ ಕೊಡುಗೆ, ಕ್ರೀಡೆಗಳಿಗೆ ಪ್ರೋತ್ಸಾಹ ಮುಂತಾದ ಸಮಾಜಸೇವೆ ಮುಂದುವರಿಸಿದವರು ಸುನೀಲ್ ಗೌಡ. ತಂದೆ ಕೆ.ವೈ. ನಂಜೇಗೌಡ ಅವರ ರಾಜಕಾರಣಕ್ಕೆ ಸಹಾಯ ಹಸ್ತ ನೀಡಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು, ಯುವ ಪೀಳಿಗೆಗೆ ಮಾದರಿಯಾಗಿರುವ ಸುನೀಲ್ ಗೌಡ ‘ವಿಜಯವಾಣಿ’ಯಿಂದ ನೀಡುವ ಪ್ರತಿಷ್ಠಿತ ‘ಬೆಂಗಳೂರು ರತ್ನ’ ಗೌರವಕ್ಕೆ ಭಾಜನರಾಗಿದ್ದಾರೆ.
ಸಮಾಜಮುಖಿ ಕೆಲಸಗಳಿಂದಲೇ ಹೆಸರುವಾಸಿಯಾಗಿರುವ ಸುನೀಲ್ ಆರಂಭದಿಂದಲೂ ಗ್ರಾಮಮಟ್ಟದಲ್ಲಿ ಯುವಶಕ್ತಿ ಸಂಘಟನೆ ಮಾಡುವುದು, ರಾಜಕಾರಣಕ್ಕೆ ಕರೆತರುವುದು, ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸುವುದು ಸೇರಿ 9 ವರ್ಷದಿಂದ ಹಲವು ಜವಾಬ್ದಾರಿಯುತ ಕೆಲಸ ಮಾಡುತ್ತಿದ್ದಾರೆ. ತಂದೆ 2 ಬಾರಿ ಶಾಸಕರಾಗಿದ್ದರೂ ಎಲ್ಲಿಯೂ ಅವರ ಹೆಸರು ಬಳಸಿಕೊಳ್ಳದೆ ತನ್ನದೆ ಆದ ಛಾಪು ಮೂಡಿಸಿರುವ ಸುನೀಲ್ ಗೌಡ ಅಸಹಾಯಕರಿಗೆ ಸಹಾಯ ಮಾಡುವ ಕಾಯಕದಲ್ಲೇ ಸಂತಸ ಕಾಣುತ್ತಿದ್ದಾರೆ.
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರತ್ನಮ್ಮಅವರ ದ್ವಿತೀಯ ಪುತ್ರ ಸುನೀಲ್ ಓದಿದ್ದು ಇಂಜಿನಿಯರಿಂಗ್. ಹೊರದೇಶದಲ್ಲಿ ಉನ್ನತ ಶಿಕ್ಷಣ ಮುಗಿಸುವ ಆಸೆ ಇತ್ತು. ಆದರೆ, ಇಂಜಿನಿಯರಿಂಗ್ ಮುಗಿಸಿದ ನಂತರ ಮಾಲೂರು ಕ್ಷೇತ್ರದಲ್ಲಿ ತಂದೆಯ ಸಹಾಯಕ್ಕೆ ನಿಂತರು. ಚುನಾವಣಾ ಪ್ರಚಾರಕ್ಕೆ ಧುಮುಕಿದರು. 2016 ರಿಂದ ಈವರೆಗೆ ಅಂದರೆ 9 ವರ್ಷಗಳಿಂದ ಹಗಲು-ರಾತ್ರಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜತೆಗೆ ಯುವ ಪಡೆಯನ್ನು ಕಟ್ಟಿ ಬೆಳೆಸುವಲ್ಲಿ ಮುಂಚೂಣಿ ನಾಯಕರೆನಿಸಿದ್ದಾರೆ.
ಕರೊನಾ ವೇಳೆ 54 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು 2 ಬಾರಿ ಮನೆ ಮನೆಗೆ ತಲುಪಿಸುವಂತಹ ಕೆಲಸವನ್ನು ಯುವಶಕ್ತಿಯಿಂದ ಮಾಡಿಸುವಲ್ಲಿ ಯಶಸ್ವಿಯಾದರು. ಇದಲ್ಲದೆ 48 ದಿನಗಳ ಕಾಲ ಮಾಲೂರು ಪಟ್ಟಣದಲ್ಲಿ ನಿರ್ಗತಿಕರಿಗೆ ನಿರಂತರ ಊಟದ ವ್ಯವಸ್ಥೆ ಮಾಡಿಸಿ, ಮಾನವೀಯತೆ ಮೆರೆದಿದ್ದಾರೆ. ರೈತರ ತರಕಾರಿ ಬೆಳೆಗಳಿಗೆ ಬೆಲೆ ಇರಲಿಲ್ಲ, ತೋಟಗಳಲ್ಲಿಯೇ ಕೊಳೆಯುತ್ತಿದ್ದ ತರಕಾರಿಗಳನ್ನು ಖರೀದಿಸಿ ಪ್ರತಿ ಗ್ರಾಮ, ಪಟ್ಟಣದ ಮನೆ ಮನೆಗೆ ಉಚಿತವಾಗಿ ಹಂಚುವ ಕೆಲಸ ಮಾಡಲಾಯಿತು. ಆಗ ವಿರೋಧಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕ್ಷೇತ್ರಕ್ಕೆ ಕರೆಸಿ ಅವರಿಂದ ತರಕಾರಿ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿ ಕರೊನಾ ಕೊನೇ ಹಂತದವರೆಗೂ ಉಚಿತವಾಗಿ ತರಕಾರಿ ಹಂಚುವ ಕೆಲಸ ಮಾಡಿದರು.
‘ವಿಜಯವಾಣಿ’ ಪತ್ರಿಕೆ ‘ವಿಜಯರತ್ನ’ ಪ್ರಶಸ್ತಿ ನೀಡಿರುವುದಕ್ಕೆ ಜವಾಬ್ದಾರಿ ಹೆಚ್ಚಿದೆ. ಪ್ರಶಸ್ತಿ ಪಡೆಯುವುದಕ್ಕಿಂತ ಮುಖ್ಯವಾಗಿ ಪ್ರಶಸ್ತಿಯ ಉದ್ದೇಶ ಈಡೇರಿಸಬೇಕಾಗಿದೆ. ಈಗಾಗಲೇ ಮಾಡಿರುವ ಸಮಾಜಸೇವೆಗೆ ಸಂದಿರುವ ಪ್ರಶಸ್ತಿ ಇದಾಗಿದ್ದು, ಮುಂದೆ ಇದಕ್ಕಿಂತಲೂ ಹತ್ತು ಪಟ್ಟು ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಈಗ ಮಾಲೂರು ಕ್ಷೇತ್ರಕ್ಕೆ ಮಾತ್ರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿಲ್ಲ. ರಾಜ್ಯಕ್ಕೆ ಪ್ರಧಾನ ಕಾರ್ಯದರ್ಶಿಯಾಗಿರುವ ಕಾರಣ ರಾಜ್ಯಾದ್ಯಂತ ಸುತ್ತಿ ಯುವ ಕಾಂಗ್ರೆಸ್ ಬಲಪಡಿಸುವ ಜವಾಬ್ದಾರಿ ನನ್ನ ಮೇಲಿದೆ ಎಂದು ಸುನೀಲ್ ಗೌಡ ತಿಳಿಸಿದ್ದಾರೆ.
ಸೇವೆಯನ್ನು ಗುರುತಿಸಿ ವಿಜಯವಾಣಿಯಿಂದ ‘ವಿಜಯರತ್ನ’ ಪ್ರಶಸ್ತಿ ದೊರೆತಿರುವುದರಿಂದ ಸಂತೋಷಕ್ಕಿಂತ ಸಾರ್ವಜನಿಕ ಬದುಕಿನಲ್ಲಿ ರಾಜಕೀಯವಾಗಿ ಬಹಳಷ್ಟು ಶಕ್ತಿ ಸಿಕ್ಕಂತಾಗಿದೆ. ಈ ಪ್ರಶಸ್ತಿ ಸಾಮಾಜಿಕ ವಲಯದಲ್ಲಿ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಇಷ್ಟು ದಿನ ಮಾಲೂರು ಕ್ಷೇತ್ರದ ಜನ ಸಮಾಜ ಸೇವಕನಾಗಿ ಕಂಡಿದ್ದರು. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ನಂತರವೂ ಆರೋಗ್ಯ, ಶೈಕ್ಷಣಿಕ, ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೆ. ಪ್ರಶಸ್ತಿ ಸ್ವೀಕರಿಸಿದ ನಂತರ ಕ್ಷೇತ್ರ, ಜಿಲ್ಲೆ ಸೇರಿ ರಾಜ್ಯದ ವಿವಿಧೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದಕ್ಕೆಲ್ಲ ವಿಜಯವಾಣಿ ಕಾರಣವಾಗಿದ್ದು, ಸುನೀಲ್ನನ್ನು ಗುರುತಿಸುವ ಜನ ಹೆಚ್ಚಾಗಿದ್ದಾರೆ. ಯಾವುದೇ ಒಬ್ಬ ಮನುಷ್ಯ ಸಮಾಜದಲ್ಲಿ ಗುರುತಿಸಿಕೊಳ್ಳಲು ಅನೇಕ ಮಾರ್ಗಗಳು ಇವೆ. ತಂದೆ ಶಾಸಕ ಕೆ.ವೈ.ನಂಜೇಗೌಡ ಅವರ ಹಾದಿಯಲ್ಲಿ ಸಾಮಾಜಿಕ ಕೆಲಸ ಮಾಡಿಕೊಂಡು ಬರಲಾಗುತ್ತಿದೆ. ಶಕ್ತಿ ಇರುವ ತನಕ ಈ ಕೆಲಸಗಳು ಮುಂದುವರಿಯಲಿವೆ. | ಸುನೀಲ್ಗೌಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
‘ವಿಜಯವಾಣಿ’ ರಾಜ್ಯದಲ್ಲಿ ನಂ.1 ಸ್ಥಾನ ಪಡೆದುಕೊಂಡಿದೆ. ಇದೇ ರೀತಿ ಓದುಗರ ಸಂಖ್ಯೆಯನ್ನು ದಿನೇದಿನೆ ಹೆಚ್ಚಿಸಿಕೊಳ್ಳುತ್ತಿದೆ. ಉತ್ತಮ ಅಂಕಣಗಳು ಮೂಡಿ ಬರುತ್ತಿವೆ. ಯುವಕರಿಗೆ ಉತ್ತಮ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ನೀಡುವಂತಹ ಅಂಕಣಗಳು ಬರುತ್ತಿವೆ. ಓದುಗರಿಗೆ ಮನಮುಟ್ಟುವಂತಹ ಕೆಲಸವನ್ನು ಪತ್ರಿಕೆ ಮಾಡುತ್ತಿದೆ ಎಂದು ಸುನೀಲ್ ಗೌಡ ಶ್ಲಾಘಿಸಿದರು.
ನಮ್ಮ ತಂದೆಗೆ ರಾಜಕೀಯವಾಗಿ ಹೆಗಲು ನೀಡಿದ ಮಾಲೂರು ಕ್ಷೇತ್ರವನ್ನು ಮಾದರಿಯನ್ನಾಗಿ ಮಾಡುವ ಉದ್ದೇಶವಿದೆ. ನಮಗಾಗಿ ಜನತೆ ತ್ಯಾಗ ಮಾಡಿರುವಾಗ ನಾವು ಅವರಿಗಾಗಿ ತ್ಯಾಗ ಮಾಡಬೇಕು. ಅವರು ನೊಂದು ನಮ್ಮ ಬಳಿ ಬಂದಾಗ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕಾಗಿದೆ. ಆ ಕೆಲಸವನ್ನು ಮಾಡಲಾಗುತ್ತದೆ. ಮಾಲೂರಿನಲ್ಲಿ ಕೈಗಾರಿಕೆಗಳು ತಲೆ ಎತ್ತಿವೆ. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ನಾನು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ನಂತರ ಪ್ರತಿ ಕೈಗಾರಿಕೆಗೆ ಭೇಟಿ ನೀಡಿ ಸ್ಥಳೀಯರಿಗೆ ಉದ್ಯೋಗ ಕೊಡಿಸುವ ಮಹತ್ಕಾರ್ಯ ಮಾಡಲಾಗುತ್ತಿದೆ ಎಂದು ಸುನೀಲ್ ಗೌಡ ತಿಳಿಸಿದ್ದಾರೆ. 2016ರಲ್ಲಿ ರಾಜಕೀಯಕ್ಕೆ ಬಂದಾಗ ಕ್ಷೇತ್ರದಲ್ಲಿ ಕಾಂಗ್ರೆಸ್ ಇರಲಿಲ್ಲ. ಯಾವುದೇ ಗ್ರಾಮಕ್ಕೆ ಹೋದರೂ ಕಾಂಗ್ರೆಸ್ ಕಾರ್ಯಕರ್ತರೇ ಇರಲಿಲ್ಲ. ನಾನು ಯುವ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆ ಮಾಡುತ್ತಾ ಪಕ್ಷಕ್ಕೆ ಸೆಳೆಯುವ ಮೂಲಕ ಪಕ್ಷ ಸಂಘಟನೆ ಮಾಡಿದೆ. ನಂತರದಲ್ಲಿ ಗುರುತಿಸಿದ ರಾಜ್ಯ ಯುವ ಕಾಂಗ್ರೆಸ್ ಸ್ಪರ್ಧೆ ಮಾಡಲು ಸೂಚನೆ ನೀಡಿತು. ಅದರಂತೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ಮಾಡಿದಾಗ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮತಗಳು ಸೇರಿ ಜಿಲ್ಲೆಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಮತಗಳು ಬಂದಿವೆ ಎಂದು ಸುನೀಲ್ ಗೌಡ ತಿಳಿಸಿದರು.
ಪ್ರಥಮ ಬಾರಿಗೆ ನಮ್ಮ ಊರಿಗೆ ಮಂಡಲ್ ಪಂಚಾಯಿತಿ ಚುನಾವಣೆ ಬಂದಾಗ ಮಹಿಳಾ ಮೀಸಲು ಆಗಿದ್ದ ಕಾರಣ ನನ್ನ ಪತ್ನಿ ರತ್ನಮ್ಮನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು. ಗ್ರಾಮಸ್ಥರ ಒತ್ತಾಸೆಯಂತೆ ಸ್ಪರ್ಧಿಸಿ ಗೆಲುವು ಸಾಧಿಸಿದರು. ನಂತರ ಗ್ರಾಮ ಪಂಚಾಯಿತಿಗೆ ಸ್ಪರ್ಧೆ ಮಾಡುವಂತೆ ಸೂಚಿಸಿದರು. ಗ್ರಾಮ ಪಂಚಾಯಿತಿಯಲ್ಲಿ ನನ್ನ ಪತ್ನಿ ಅಧ್ಯಕ್ಷೆಯಾದರು. ನಾನೂ ಅಷ್ಟೊತ್ತಿಗೆ ರಾಜಕೀಯ ಪ್ರವೇಶ ಮಾಡಿ ತಾಲೂಕು ಪಂಚಾಯಿತಿ ಸದಸ್ಯನಾಗಿ, ಅಧ್ಯಕ್ಷನೂ ಆದೆ. ರಾಜಕೀಯ ಬದಲಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದೆ. ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ಟೇಕಲ್ ಹೋಬಳಿ, ಮಹಿಳಾ ಮೀಸಲಾತಿಗಾಗಿ ನನ್ನ ಪತ್ನಿ ಸ್ಪರ್ಧೆ ಮಾಡುವಂತೆ ಒತ್ತಡ ತಂದರು. ಆಗ ಪತ್ನಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರೂ ಆದರು. 2013ರಲ್ಲಿ ಜೆಡಿಎಸ್ನಿಂದ ಶಾಸಕರ ಸ್ಥಾನಕ್ಕೆ ಸ್ಪರ್ಧೆ ಮಾಡುವಂತೆ ಒತ್ತಡ ತಂದರು. ನಾನೇ ಆಗ ಮಾಜಿ ಶಾಸಕ ಮಂಜುನಾಥ್ ಗೌಡರಿಗೆ ಟಿಕೆಟ್ ಕೊಡಿಸಿ ಜನತಾದಳದಿಂದ ಶಾಸಕನಾಗಿ ಆಯ್ಕೆ ಮಾಡಲಾಯಿತು. ಎಂಎಲ್ಸಿ ಚುನಾವಣೆ ಸಂದರ್ಭದಲ್ಲಿ ಮಂಜುನಾಥ್ಗೌಡ ನನ್ನ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಮತ್ತೆ ನಾನು ಕೆ.ಎಚ್.ಮುನಿಯಪ್ಪ ಮತ್ತು ಎಂಎಲ್ಸಿ ಅನಿಲ್ಕುಮಾರ್ ನೇತೃತ್ವದಲ್ಲಿ ಕೈ ಹಿಡಿದು 2018ರಿಂದ ಇಲ್ಲಿಯವರೆವಿಗೂ ಸತತವಾಗಿ 2 ಬಾರಿ ಶಾಸಕನಾಗಿ 2 ಬಾರಿ ಕೋಚಿಮುಲ್ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ ಎಂದು ಶಾಸಕ ನಂಜೇಗೌಡ ರಾಜಕೀಯ ಹಾದಿಯನ್ನು ಪರಿಚಯಿಸಿಕೊಂಡರು.
ಕುಟುಂಬ ಮೊದಲಿನಿಂದಲೂ ರಾಜಕೀಯವಾಗಿ ಇಲ್ಲದಿದ್ದರೂ ಗ್ರಾಮ ಪಂಚಾಯಿತಿಯಿಂದ ನಮ್ಮ ತಾಯಿ ಪ್ರವೇಶ ಮಾಡಿದ ನಂತರ ಹಂತ ಹಂತವಾಗಿ ತಾಪಂ, ಜಿಪಂ ಪ್ರವೇಶ ಮಾಡಿ ಶಾಸಕರ ಸ್ಥಾನ ಪಡೆದುಕೊಂಡಿದ್ದೇವೆ. ಕುಟುಂಬ ವ್ಯವಸಾಯದ ಜತೆಗೆ ರಾಜಕಾರಣ ಮಾಡುತ್ತಿದ್ದೇವೆ. ಪತ್ನಿ ಪ್ರಸೂತಿ ತಜ್ಞರಾಗಿದ್ದು, ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಸಾರ್ವಜನಿಕರಿಗೆ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕೆಂಬ ಅಪೇಕ್ಷೆ ಇದೆ.
ರಾಜಕೀಯವಾಗಿ ಯುವಕರು ತೊಡಗಿಸಿಕೊಂಡಲ್ಲಿ ದೇಶ ಮತ್ತು ರಾಜ್ಯ ಉದ್ಧಾರವಾಗಲು ಸಾಧ್ಯ. ಯುವಶಕ್ತಿಯ ಮುಂದೆ ಯಾವ ಶಕ್ತಿಯೂ ಇಲ್ಲ. ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಂತರ ರಾಜ್ಯಾದ್ಯಂತ ಸುತ್ತಬೇಕಿದೆ. ಯುವಶಕ್ತಿಯನ್ನು ಸಂಘಟಿಸಬೇಕಾಗಿದೆ. ಮೊದಲು ತಾಲೂಕು ಮತ್ತು ಜಿಲ್ಲೆ ನಂತರ ಹಂತ ಹಂತವಾಗಿ ರಾಜ್ಯಾದ್ಯಂತ ಪ್ರವಾಸ ಮಾಡಬೇಕಾಗಿದೆ. ಯುವಕರನ್ನು ಸಂಘಟಿಸುವ ಕೆಲಸ ಮಾಡಲಾಗುವುದು ಎಂದು ಸುನೀಲ್ ಗೌಡ ತಿಳಿಸಿದ್ದಾರೆ.
ತಂದೆ 2018ರಲ್ಲಿ ಕಾಂಗ್ರೆಸ್ನಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದಾಗ ಊರೂರು ಸುತ್ತಿ ಯುವಪಡೆ ಕಟ್ಟಿ ವಾರ್ ರೂಮ್ ಸ್ಥಾಪನೆ ಮಾಡಿದ ನಂತರ ಯುವಶಕ್ತಿ ಸಂಘಟನೆ ಮಾಡುವ ಮೂಲಕ ತಂದೆಯನ್ನು ಶಾಸಕನಾಗಿ ಮಾಡಲು ಶ್ರಮಿಸಿದರು. ಅಲ್ಲಿಂದಲೇ ರಾಜಕೀಯ ವೃತ್ತಿ ಆರಂಭಿಸಿದ ಸುನೀಲ್ ಗೌಡ ತನ್ನದೇ ಆದ ವರ್ಚಸ್ಸು ಬೆಳೆಸಿಕೊಂಡು ಜನರ ಆಶೀರ್ವಾದ ಪಡೆಯಲು ಜನರ ಬಳಿಗೆ ತೆರಳಿ ಅಹವಾಲು ಕೇಳಲು ಶುರು ಮಾಡಿಕೊಂಡರು. ಮನೆ ಕುಟುಂಬಸ್ಥರ ಸಹಕಾರಕ್ಕಿಂತ ಜನರ ಆಶೀರ್ವಾದವೇ ಮುಖ್ಯ ಎಂಬಂತೆ ಸುನೀಲ್ ಗೌಡ ಶ್ರಮಿಸುತ್ತಿದ್ದಾರೆ.
ಇಂಜಿನಿಯರಿಂಗ್ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗದಿದ್ದರೂ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎಂಬ ನಿಟ್ಟಿನಲ್ಲಿ ಓದನ್ನು ಮೊಟುಕುಗೊಳಿಸಿ, ಪ್ರಸೂತಿ ವೈದ್ಯೆ ಡಾ.ವರ್ಷಿಣಿ ಅವರನ್ನು ವಿವಾಹವಾದ ನಂತರ ಪತ್ನಿಯ ಪ್ರೇರೇಪಣೆ ಜತೆಗೆ ಅಣ್ಣ ಹರೀಶ್ ಹಾಗೂ ಚಿಕ್ಕಪ್ಪ ಹೀರೇಗೌಡ ಮತ್ತು ತಂದೆ ಮತ್ತು ತಾಯಿ ಹಾಗೂ ಕುಟುಂಬಸ್ಥರ ಸಹಕಾರದೊಂದಿಗೆ ರಾಜಕೀಯ ಪ್ರವೇಶ ಪಡೆದರು.
2013ರಲ್ಲಿ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಎ.ನಾಗರಾಜ್ 10 ಸಾವಿರ ಮತ ಪಡೆದಿದ್ದರು. 2016 ರಲ್ಲಿ ಕಾಂಗ್ರೆಸ್ಗೆ ಮರಳಿ ಬಂದಾಗ ಕ್ಷೇತ್ರದಲ್ಲಿ ಪ್ರತಿ ಗ್ರಾಮದಲ್ಲಿ ಪಕ್ಷ ಸಂಘಟಿಸಿ 2018ರ ಚುನಾವಣೆ ಹೊತ್ತಿಗೆ ಎಲ್ಲ ರೀತಿಯ ಕೆಲಸ ಮಾಡಿ ಶಾಸಕನಾದೆ. ಸಮ್ಮಿಶ್ರ ಸರ್ಕಾರ ಆದ ಕಾರಣ ಕ್ಷೇತ್ರಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹಣವೇ ನೀಡಲಿಲ್ಲ. ಕ್ಷೇತ್ರದಲ್ಲಿ ಸಮಾಜಸೇವೆ ಮುಂದುವರಿಸಿಕೊಂಡು ಶಾಸಕರಿಗೆ ನೀಡಿದ ಅನುದಾನದಲ್ಲಿ ಕ್ಷೇತ್ರ ಅಭಿವೃದ್ಧಿಪಡಿಸಿ 2ನೇ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಮಗ ಸುನೀಲ್ ನನ್ನು ರಾಜಕೀಯಕ್ಕೆ ತರಬೇಕೆಂಬ ಇಚ್ಛೆ ನನಗಿಲ್ಲ. ಆದರೆ ಅವನೇ ಸ್ವಂತ ಬಲದ ಮೇಲೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾನೆ. ಎಲ್ಲಿಯೂ ನನ್ನ ಹೆಸರನ್ನು ಬಳಸಿಕೊಂಡಿಲ್ಲ ಎನ್ನುತ್ತಾರೆ ನಂಜೇಗೌಡ.
ಪತಿ ನನ್ನನ್ನು ಮಂಡಲ್ ಪಂಚಾಯಿತಿ ಸದಸ್ಯೆಯಾಗಿ ಆಯ್ಕೆ ಮಾಡಿದ ನಂತರ ಅವರು ರಾಜಕೀಯ ಪ್ರವೇಶ ಮಾಡಿದರು. ಅವರ ರಾಜಕೀಯಕ್ಕೆ ನಾನೂ ಪ್ರೇರಣೆಯಾಗಿದ್ದೇನೆ. ಕುಟುಂಬದಿಂದ ಗ್ರಾಮದಲ್ಲಿ ಒಬ್ಬರು ಸ್ಪರ್ಧೆ ಮಾಡಲೇಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದ ಕಾರಣ ನನ್ನ ನಂತರ ಈಗ ನನ್ನ ಮೈದುನ ಗ್ರಾಮ ಪಂಚಾಯಿತಿ ಸದಸ್ಯನಾಗಿದ್ದಾನೆ. ರಾಜಕೀಯ ಪ್ರವೇಶಕ್ಕೂ ಮುನ್ನ ಹುಣಸೇಕಾಯಿ ಒಡೆಯುವುದು, ರಾಗಿ ಬೀಸುವುದು ಸೇರಿ ಎಲ್ಲ ಕೆಲಸ ಮಾಡಿದ್ದೇನೆ. ಈಗಲೂ ವ್ಯವಸಾಯ ಹಾಗೂ ರಾಜಕೀಯಕ್ಕೆ ನನ್ನ ಸಹಕಾರ ಇದೆ. ನನ್ನ ಮಗನಿಗೂ ಸಹಕಾರ ನೀಡುತ್ತಿದ್ದೇನೆ ಎಂದು ಸುನೀಲ್ ಗೌಡರ ತಾಯಿ ರತ್ನಮ್ಮ ನಂಜೇಗೌಡ ತಿಳಿಸಿದ್ದಾರೆ.
ಕರೊನಾ ವೇಳೆ ಪತಿ ನಂಜೇಗೌಡರಿಗೂ ಸೇರಿ ನನ್ನ ಕುಟುಂಬದ 14 ಜನಕ್ಕೆ ಕರೊನಾ ಪಾಸಿಟಿವ್ ಬಂದಿತ್ತು. ಪತಿ ಭಯಪಟ್ಟು ಕಣ್ಣೀರು ಹಾಕಿದ್ದರು. ಎದೆಗುಂದದೆ ಧೈರ್ಯ ತುಂಬಿ ದೇವರು ಒಳ್ಳೆಯದು ಮಾಡುತ್ತಾನೆ ಎಂದು ದೇವರ ಮೇಲೆ ಭಾರ ಹಾಕಿ ಸಮಾಜಸೇವೆ ಮುಂದುವರಿಸಿದರು. ಪತಿ ಊರೂರು ಸುತ್ತಿ ಕರೊನಾ ಕಷ್ಟ ಕಾಲದಲ್ಲಿ ಎಲ್ಲರಿಗೂ ಧೈರ್ಯ ತುಂಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ರಾತ್ರಿ 10 ಗಂಟೆಗೆ ಮನೆಗೆ ಬರುತ್ತಿದ್ದರು. ಆದರೂ ನನ್ನ ಕುಟುಂಬದ ಇಬ್ಬರು ಸಂಬಂಧಿಕರು ಕರೊನಾದಲ್ಲಿ ಮೃತಪಟ್ಟರು. ಮಣ್ಣು ಹಾಕಲು ಆಗಲಿಲ್ಲ ಎಂದು ರತ್ನಮ್ಮ ನಂಜೇಗೌಡ ಕಣ್ಣೀರಿಟ್ಟರು.