ಸಂಸದರು-ರೈಲ್ವೆ ಸಚಿವರಿಂದ ಸಿಗದ ಸ್ಪಂದನೆ, ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸುನೀಲಗೌಡರು, ಪತ್ರದಲ್ಲಿ ಏನಿದೆ ಗೊತ್ತಾ?

MLC SUNILGOUDA LETTER TO MODI
Published on

ವಿಜಯಪುರ: ವಂದೇ ಭಾರತ ರೈಲು ವಿಜಯಪುರದವರೆಗೆ ವಿಸ್ತರಿಸಲು ಆಗ್ರಹಿಸಿ ಪತ್ರ ಬರೆದರೂ ಸಂಸದರು ಹಾಗೂ ರೈಲ್ವೆ ಸಚಿವರಿಂದ ಸಕಾರಾತ್ಮಕ ಸ್ಪಂದನೆ ಸಿಗದ ಹಿನ್ನೆಲೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ನೇರವಾಗಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬೈ-ಸೋಲಾಪುರ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿದ್ದಾರೆ.

ಈ ಬೇಡಿಕೆ ಕುರಿತು 2023 ನ.24ರಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಅವರಿಗೆ ಪತ್ರ ಬರೆಯಲಾಗಿದೆ. ಮತ್ತೆ 2024 ಜ.10ರಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರಿಗೂ ಪತ್ರ ಬರೆಯಲಾಗಿ ಈವರೆಗೆ ಸ್ಪಂದಿಸಿಲ್ಲ ಎಂದು ಅವರು ಪ್ರಧಾನಿಗೆ ಬರೆದಿರುವ ಮೂರು ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

ಮಾ. 09 ರಂದು ಪತ್ರ ಬರೆದಿರುವ ಶಾಸಕರು, ಭಾರತದ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಜನತೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಂಚರಿಸಲು ಹೆಚ್ಚುವರಿಯಾಗಿ ರೈಲುಗಳನ್ನು ಓಡಿಸುವುದರ ಜೊತೆಗೆ ರೈಲಿನಲ್ಲಿ ಸ್ವಚ್ಚತೆ ಸೇರಿದಂತೆ ನಾನಾ ರೀತಿಯ ಆಧುನಿಕ ಸೌಲಭ್ಯಗಳನ್ನು ಒದಗಿಸಿರುವುದು ಸಂತಸದ ಸಂಗತಿಯಾಗಿದೆ.

ಆದರೆ, ವಿಜಯಪುರದಿಂದ ಬಾಗಲಕೋಟೆ ಮಾರ್ಗವಾಗಿ ಬೆಂಗಳೂರಿಗೆ ಹೋಗಲು ರೈಲು ಸೇವೆ ಇದ್ದರೂ ಈ ರೈಲುಗಳ ಸಂಚಾರದ ಸಮಯ ಅನುಕೂಲವಾಗಿಲ್ಲ. ಈ ರೈಲುಗಳು ಸರಿಯಾದ ಸಮಯಕ್ಕೆ ನಿಗದಿತ ಸ್ಥಳಗಳನ್ನು ತಲುಪದ ಕಾರಣ ಕೆಲಸ ಕಾರ್ಯಗಳಿಗಾಗಿ ಮತ್ತು ದಿನನಿತ್ಯದ ವ್ಯವಹಾರ ಸಂಬಂಧಿ ಕೆಲಸಗಳಿಗಾಗಿ ಹಾಗೂ ಸರ್ಕಾರಿ ಕಚೇರಿ ಕೆಲಸಗಳಿಗಾಗಿ ಬೆಂಗಳೂರಿಗೆ ಪ್ರಯಾಣಿಸುವ ಜನರಿಗೆ ತೊಂದರೆ ಉಂಟಾಗಿದೆ.

ಅಲ್ಲದೇ, ಬೆಂಗಳೂರಿನಿಂದ ವಿಜಯಪುರಕ್ಕೆ ಬರುವ ರೈಲುಗಳ ಸಂಚಾರ ಸಮಯವೂ ಹೆಚ್ಚಾಗಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಾಕಷ್ಟು ಯುವಕರು ಬೆಂಗಳೂರಿನಲ್ಲಿ ನಾನಾ ಉದ್ಯೋಗದಲ್ಲಿದ್ದಾರೆ. ಹಬ್ಬಗಳ ಮತ್ತು ಸಾಲುಸಾಲು ರಜೆಗಳ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಕೆಲವು ಖಾಸಗಿ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಎರಡರಿಂದ ಮೂರು ಪಟ್ಟು ಹೆಚ್ಚಳ ಮಾಡುತ್ತಾರೆ. ಇದರಿಂದ ಬೆಂಗಳೂರಿನಲ್ಲಿ ಕೆಲಸ ಮಾಡುವ ಯುವಕರು, ಕಾರ್ಮಿಕರು ಮತ್ತು ಇತರೆ ಸಾರ್ವಜನಿಕರಿಗೆ ತುಂಬಾ ಹೊರೆಯಾಗುತ್ತದೆ. ಜೊತೆಗೆ ಜನರ ಹಬ್ಬದ ಸಂಭ್ರಮದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಹೀಗಾಗಿ ವಿಜಯಪುರದಿಂದ ಪ್ರತಿದಿನ ರಾತ್ರಿ 9 ಕ್ಕೆ ರೈಲು ಸಂಚಾರ ಪ್ರಾರಂಭಿಸಿ ಮರುದಿನ ಬೆಳಗ್ಗೆ 6 ಕ್ಕೆ ಬೆಂಗಳೂರು ತಲುಪುವಂತಾಗಬೇಕು. ಅದೇ ರೀತಿ ಬೆಂಗಳೂರಿನಿಂದಲೂ ಪ್ರತಿದಿನ ರಾತ್ರಿ 9 ಕ್ಕೆ ರೈಲು ಹೊರಟು ಮರುದಿನ ಬೆಳಗ್ಗೆ 6ಕ್ಕೆ ವಿಜಯಪುರ ತಲುಪುವ ವ್ಯವಸ್ಥೆ ಮಾಡಬೇಕು. ವಿಜಯಪುರ ಜಿಲ್ಲೆ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿದ್ದು, ಮುಂಬೈ ಮತ್ತು ಕರ್ನಾಟಕಕ್ಕೆ ಮಧ್ಯೆ ಸುಮಾರು 500 ವರ್ಷಗಳಿಂದಲೂ ಅವಿನಾಭಾವ ಸಂಬಂಧವಿದೆ.

ಭಾವನಾತ್ಮಕವಾಗಿ ವಿಜಯಪುರ ಮತ್ತು ಮುಂಬೈ ಹಾಗೂ ಸೋಲಾಪೂರ ಜನರ ಮಧ್ಯೆ ಸಂಬಂಧ ಬೆಸೆದುಕೊಂಡಿದೆ. ಗಡಿ ಭಾಗದ ಜನರು ಮುಂಬೈ ಮತ್ತು ಸೋಲಾಪೂರ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಾರೆ. ಈ ಭಾಗದ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳನ್ನೂ ಸಾಗಿಸುತ್ತಾರೆ. ಜನರ ವಹಿವಾಟುಗಳಿಗೆ ಅನುಕೂಲವಾಗಲು ಮುಂಬೈ- ಸೋಲಾಪೂರ ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸಿದರೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಮುಂಬೈ- ಸೋಲಾಪೂರ ವರೆಗೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರ ವರೆಗೆ ಓಡಿಸಲು ಆದೇಶ ಹೊರಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net