

ಮುದ್ದೇಬಿಹಾಳ: ಸಿದ್ಧೇಶ್ವರ ಸ್ವಾಮೀಜಿಯವರ ಆಶಿರ್ವಾದದೊಂದಿಗೆ ಪ್ರಾರಂಭಗೊಂಡಿರುವ ಬಿಎಲ್‌ಡಿ (ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್) ಸೌಹಾರ್ದ ಸಹಕಾರಿ ಬ್ಯಾಂಕ್ ಕೇವಲ ಎರಡೇ ವರ್ಷಗಳಲ್ಲಿ 400 ಕೋಟಿ ರೂ. ವ್ಯವಹಾರ ಮಾಡುತ್ತಿರುವುದು, 225 ಕೋಟಿ ಠೇವಣಿ ಹೊಂದಿರುವುದು ಗ್ರಾಹಕರು ಬ್ಯಾಂಕ್ ಮೇಲಿಟ್ಟಿರುವ ನಂಬಿಕೆಗೆ ಕನ್ನಡಿಯಂತಿದೆ ಎಂದು ವಿಧಾನ ಪರಿಷತ್ ಸದಸ್ಯ, ಸೌಹಾರ್ದ ಬ್ಯಾಂಕ್ ಅಧ್ಯಕ್ಷ ಸುನೀಲಗೌಡ ಪಾಟೀಲ ಹೇಳಿದರು.
ಇಲ್ಲಿನ ಬಸವೇಶ್ವರ ವೃತ್ತದ ಹತ್ತಿರದ ನಾವಡ ಕಾಂಪ್ಲೆಕ್ಸ್‌ನಲ್ಲಿ ಶುಕ್ರವಾರ ಬಿಎಲ್‌ಡಿ (ಬಿಜಾಪುರ ಲಿಂಗಾಯತ ಡೆವಲಪ್‌ಮೆಂಟ್) ಸೌಹಾರ್ದ ಸಹಕಾರಿ ಬ್ಯಾಂಕ್‌ನ 10ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ ಪ್ರಮುಖ ತಾಲೂಕು ಕೇಂದ್ರ, ಪಟ್ಟಣ ಪ್ರದೇಶಗಳಲ್ಲಿ ಬ್ಯಾಂಕ್‌ನ ಶಾಖೆಗಳನ್ನು ಆರಂಭಿಸುವ ಮೂಲಕ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಸಲ್ಲಿಸುವ ಉದ್ದೇಶವನ್ನು ಹೊಂದಿದ್ದೇವೆ. ಜನರ ವಿಶ್ವಾಸ, ನಂಬಿಕೆಯನ್ನು ಉಳಿಸಿಕೊಂಡು ಗ್ರಾಹಕರು, ಶೇರುದಾರರಿಗೆ ಉತ್ತಮ, ಸ್ಪರ್ಧಾತ್ಮಕ ಸೌಲಭ್ಯಗಳನ್ನು ಕೊಡಲು ಆಡಳಿತ ಮಂಡಳಿ ಬದ್ಧವಾಗಿದೆ. ಇದುವರೆಗೆ 175 ಕೋಟಿ ರೂ. ವರೆಗೆ ರೈತರು, ಪಿಗ್ಮಿದಾರರಿಗೆ ಸಾಲ ನೀಡಿದ್ದು ಸಾಲಗಾರರೆಲ್ಲ ಸಮಯಕ್ಕೆ ಸರಿಯಾಗಿ ಸಾಲದ ಕಂತನ್ನು ಮರಳಿ ತುಂಬುತ್ತಿದ್ದಾರೆ. ಬರಲಿರುವ ದಿನಗಳಲ್ಲಿ 500 ಕೋಟಿ ರೂ. ವ್ಯವಹಾರದ ಗುರಿ, ಬೆಂಗಳೂರು ಮಹಾನಗರದಲ್ಲೂ ಶಾಖೆ ಪ್ರಾರಂಭಿಸುವ ಗುರಿ ಹೊಂದಲಾಗಿದೆ ಎಂದರು.
ಬ್ಯಾಂಕ್ ಆಡಳಿತ ಮಂಡಳಿಯ ನಿರ್ದೇಶಕ ವಿಜಯಕುಮಾರ ಕನಮಡಿ ಮಾತನಾಡಿ, ಹಿರಿಯ ನಾಗರಿಕರು, ಮಾಜಿ ಸೈನಿಕರು, ಅಂಗವಿಕಲರು, ವಿಧವೆಯರಿಗೆ ಶೇ.0.5 ಹೆಚ್ಚುವರಿ ಬಡ್ಡಿ ಸೌಲಭ್ಯ ಮತ್ತು ಅವರ ಮನೆ ಬಾಗಿಲಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಆರ್‌ಟಿಜಿಎಸ್, ಎನ್‌ಇಎ್ಟಿ, ಹಣ ದ್ವಿಗುಣ ಸೇರಿ ಹಲವು ಸೌಲಭ್ಯಗಳನ್ನು ಜಾರಿಗೊಳಿಸಲಾಗಿದೆ ಎಂದರು.
ಕುಂಟೋಜಿ ಭಾವೈಕ್ಯ ಮಠದ ಡಾ. ಗುರು ಚನ್ನವೀರ ಶಿವಾಚಾರ್ಯರು ಮಾತನಾಡಿ, ಈ ಶಾಖೆಯಲ್ಲಿ ರೈತರು, ಬಡವರು, ಮಧ್ಯಮವರ್ಗದವರು, ಕೂಲಿಕಾರರಿಗೆ ಸಾಲ ಸೌಲಭ್ಯ ದೊರಕಿಸಿಕೊಡುವ ಮೂಲಕ ಆರ್ಥಿಕ ಭದ್ರತೆಗೂ ಹೆಚ್ಚಿನ ಒತ್ತು ನೀಡಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಕಾಂಗ್ರೆಸ್ ಮುಖಂಡರಾದ ಸಿ.ಬಿ.ಅಸ್ಕಿ, ರಾಯನಗೌಡ ತಾತರಡ್ಡಿ, ದಿ.ಕರ್ನಾಟಕ ಕೋ ಆಪ್ ಬ್ಯಾಂಕ್ ಅಧ್ಯಕ್ಷ ಸತೀಶಕುಮಾರ ಓಸ್ವಾಲ, ಮಾಜಿ ಅಧ್ಯಕ್ಷ ಸಂಗನಗೌಡ ಬಿರಾದಾರ (ಜಿಟಿಸಿ), ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ವೆಂಕನಗೌಡ ಪಾಟೀಲ, ಕಸಾಪ ತಾಲೂಕು ಅಧ್ಯಕ್ಷ ಕಾಮರಾಜ ಬಿರಾದಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ವಿವೇಕಾನಂದ ವಿದ್ಯಾಪ್ರಸಾರಕ ಸಮಿತಿಯ ಕಾರ್ಯದರ್ಶಿ ಪ್ರಭು ಕಡಿ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆಯ ಸಂಚಾಲಕ ಸುರೇಶಗೌಡ ಪಾಟೀಲ ಇಂಗಳಗೇರಿ, ರುದ್ರಗೌಡ ಅಂಗಡಗೇರಿ, ಅಪ್ಪು ದೇವಿನಾಳ, ರಾಜು ಕರಡ್ಡಿ, ಸಿಕಂದರ್ ಜಾನ್ವೆಕರ್, ಅಶೋಕ ಇರಕಲ್, ಬ್ಯಾಂಕ್‌ನ ನಿರ್ದೇಶಕ ಎಸ್.ಎಸ್.ಪಾಟೀಲ, ಆಡಳಿತಾಧಿಕಾರಿ ಎಸ್.ಕೆ.ಗೊಂಗಡಿ, ಸಲಹಾ ಸಮಿತಿ ಸದಸ್ಯ ವಿಜಯಕುಮಾರ್ ಜತ್ತಿ, ಸಿಇಒ ಸಿದ್ಧಾರ್ಥ ಪಾಟೀಲ, ರಾಜು ಕನಕರೆಡ್ಡಿ, ಬಸವರಾಜ ಬಿರಾದಾರ, ಜೆ.ಜೆ.ಶ್ರೀಕಾಂತ, ಶರಣಗೌಡ ಪಾಟೀಲ ಇತರರಿದ್ದರು.