

ಮುಂಡರಗಿ: ಖಾಸಗಿ ಕಂಪನಿಯೊಂದು ವಿತರಿಸಿದ ಸೂರ್ಯಕಾಂತಿ ಬೀಜ ಕಳಪೆಯಾಗಿದ್ದು ಬೆಳೆ ಹಾಳಾಗಿದೆ.
ಹೀಗಾಗಿ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಪಟ್ಟಣದಲ್ಲಿ ರೈತರು ಸಹಾಯಕ ಕೃಷಿ ನಿರ್ದೇಶಕ ವೆಂಕಟೇಶಮೂರ್ತಿ ಟಿ.ಸಿ. ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ತಾಲೂಕು ಅತ್ಯಂತ ಬರಗಾಲ ಪೀಡಿತ ಪ್ರದೇಶವಾಗಿದ್ದು, ಅದರಲ್ಲಿ ರೈತರು ನೀರಾವರಿ ಪ್ರದೇಶದಲ್ಲಿ ಖಾಸಗಿ ಕಂಪನಿಯ ಸೂರ್ಯಕಾಂತಿ ಬೀಜ ಖರೀದಿಸಿ ಸುಮಾರು ಒಂದೂವರೆಯಿಂದ ಎರಡು ತಿಂಗಳ ಹಿಂದೆ ಬಿತ್ತನೆ ಮಾಡಲಾಗಿದೆ.
ಆದರೆ, ಈಗ ಸೂರ್ಯಕಾಂತಿ ಬೆಳೆ ಎತ್ತರ ಪ್ರಮಾಣ ಕುಂಠಿತವಾಗಿದ್ದು, ತೆನೆಯಲ್ಲಿ ಕಾಳು ಕಟ್ಟದೇ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಪ್ರತಿ ಎಕರೆಗೆ 15ರಿಂದ 20 ಸಾವಿರ ರೂ. ಖರ್ಚು ಮಾಡಲಾಗಿದ್ದು, ಈಗ ಫಸಲು ಬಾರದಂತಾಗಿದೆ.
ಆದ್ದರಿಂದ ಬೀಜ ವಿತರಿಸಿದ ಕಂಪನಿ ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ, ಎಚ್.ಬಿ. ಕುರಿ, ಶರಣಪ್ಪ ಕಂಬಳಿ, ಚನ್ನಪ್ಪ ಮೇಟಿ, ಮೈನುದ್ದಿನ್ ಮಾಳೆಕೊಪ್ಪ, ಮಹೇಶ ಕೋಣನವರ, ಮಂಜಪ್ಪ ಹೆಬಸೂರು, ಶರಣಪ್ಪ ವಾಲಿಕಾರ, ರವಿ ಗೌರಿಪುರ, ಶಿವಾನಂದ ಹಡಪದ, ನಿಂಗಪ್ಪ ತೋಟಪ್ಪನವರ, ಎಂ.ಎಸ್. ಸಜ್ಜನರ, ಎಸ್.ಎಸ್. ಹಳ್ಳಿಕೇರಿ, ರಂಜಾನಸಾಬ್ ಮಾಳೆಕೊಪ್ಪ ಇತರರು ಇದ್ದರು.