ಲಾಕ್‌ಡೌನ್‌ಗೆ ಮನೆಯಲ್ಲೇ ಲಾಕ್ ಆದ ಜನ

DSC_8395
Published on

ತುಮಕೂರು: ಕರೊನಾ ವೈರಸ್ ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ರೂಪಿಸಿರುವ ನಿಯಮದಂತೆ ಶನಿವಾರ ರಾತ್ರಿ 8ಕ್ಕೆ ಆರಂಭವಾಗಿದ್ದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲೆಯೆಲ್ಲೆಡೆ ಜನರು ಮನೆಯಲ್ಲಿಯೇ ಉಳಿದರು.

ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 252 ತಲುಪಿದ್ದು, ತುಮಕೂರು ನಗರದಲ್ಲಿ ಅತೀ ಹೆಚ್ಚು ಬರೋಬ್ಬರಿ 66 ಪ್ರಕರಣ ವರದಿಯಾಗಿವೆ. ಇದರಿಂದ ಜನರು ಭಯದಿಂದ ತತ್ತರಿಸಿದ್ದು ಲಾಕ್‌ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರು.

ಅಗತ್ಯ ವಸ್ತುಗಳಾದ ತರಕಾರಿ, ಔಷಧ, ದಿನಸಿ, ಆಸ್ಪತ್ರೆ, ಮಾಂಸದ ಅಂಗಡಿ, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ರಸ್ತೆಯಲ್ಲಿ ವಾಹನಗಳು ಅನಾವಶ್ಯಕವಾಗಿ ಓಡಾಡದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿತ್ತು.

ಸೋಂಕಿತರು ಹೆಚ್ಚಿರುವ ತುಮಕೂರು, ಮಧುಗಿರಿ, ಪಾವಗಡ, ಗುಬ್ಬಿ ತಾಲೂಕು ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಲಾಕ್‌ಡೌನ್ ಪಾಲನೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿತ್ತು, ತಿಪಟೂರು ಸೇರಿ ಎಲ್ಲ ತಾಲೂಕು ಹಾಗೂ ಹೋಬಳಿ ಕೇಂದ್ರದಲ್ಲಿಯೂ ವಾಹನ ಸವಾರರು ರಸ್ತೆಗಿಳಿಯುವ ಸಾಹಸ ಮಾಡಲಿಲ್ಲ. ಬಸ್, ಆಟೋ, ಮದ್ಯದ ಅಂಗಡಿಗಳು ಬಾಗಿಲು ಮುಚ್ಚಿದ್ದವು, ನಗರದ ಎಂ.ಜಿ.ರಸ್ತೆ, ಬಿಎಚ್ ರಸ್ತೆ, ಎಸ್‌ಎಸ್ ಪುರಂ, ಎಸ್‌ಐಟಿ ಮುಖ್ಯರಸ್ತೆ, ಮಾರುಕಟ್ಟೆಯಲ್ಲಿಯೂ ಅಂಗಡಿಗಳನ್ನು ಮುಚ್ಚಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net