

ತುಮಕೂರು: ಕರೊನಾ ಸೋಂಕು ತಡೆಗಟ್ಟುವ ಸಲುವಾಗಿ ರಾಜ್ಯ ಸರ್ಕಾರ ಘೋಷಿಸಿರುವ ‘ಸಂಡೇ ಲಾಕ್‌ಡೌನ್’ ಹಿನ್ನೆಲೆಯಲ್ಲಿ ಭಾನುವಾರ ನಗರದ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳ ಸಂಚಾರವು ಬಹುತೇಕ ವಿರಳವಾಗಿತ್ತು.
ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ, ಮಾಂಸ, ಹಣ್ಣುಗಳ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು, ಪ್ರಮುಖ ರಸ್ತೆಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಅನಗತ್ಯವಾಗಿ ಓಡಾಡುವವರ ಸಂಖ್ಯೆ ಕಡಿಮೆ ಇದ್ದದ್ದರಿಂದ ಪೊಲೀಸರು ತುಸು ನೆಮ್ಮದಿಯಾಗಿ ಕಾರ್ಯನಿರ್ವಹಿಸಿದರು.
ನಗರದ ಪ್ರಮುಖ ರಸ್ತೆಗಳಾದ ಬಿ.ಎಚ್.ರಸ್ತೆ, ಎಂ.ಜಿ.ರಸ್ತೆ, ಎಸ್‌ಎಸ್ ಪುರಂ, ಎಸ್‌ಐಟಿ ಹಾಗೂ ಕುಣಿಗಲ್ ರಸ್ತೆಗಳು ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ತರಕಾರಿ, ಹಣ್ಣು ಹಾಗೂ ಮಾಂಸ ಖರೀದಿಗಷ್ಟೇ ಜನರು ಮನೆಯಿಂದ ಹೊರಬರುವ ಸಾಹಸ ಮಾಡಿದರು. ಮೀನು, ಕೋಳಿ, ಮಾಂಸದ ಅಂಗಡಿಯ ಮುಂದಷ್ಟೇ ಜನರು ಸಾಲುಗಟ್ಟಿ ನಿಂತು ಕೊಂಡುಕೊಂಡರು. ಹಣ್ಣು, ತರಕಾರಿ, ದಿನಸಿ ಅಂಗಡಿಗಳ ಮುಂದೆ ಜನರು ಕಾಣಿಸಲಿಲ್ಲ.
ಮದ್ಯದಂಗಡಿ, ಕೆಎಸ್‌ಆರ್‌ಟಿಸಿ ಬಸ್, ಆಟೋ, ಕ್ಯಾಬ್ ಸೇರಿ ಸಾರ್ವಜನಿಕ ಸಾರಿಗೆ ಇರಲಿಲ್ಲ. ಕೆಲವು ರಸ್ತೆಗಳಲ್ಲಿ ಕಾಣಿಸಿದ ಆಟೋಗಳಿಗೆ ಪೊಲೀಸರು ಬುದ್ಧಿ ಹೇಳಿ ವಾಪಸ್ ಕಳುಹಿಸಿದ್ದು ಕಂಡುಬಂತು. ಭಾನುವಾರ ಬೆಳಗ್ಗೆಯೇ ಪೊಲೀಸರು ಮನೆಯಿಂದ ಹೊರಬರದಂತೆ ಜನರಿಗೆ ಎಚ್ಚರಿಕೆ ರವಾನಿಸಿದ್ದರು, ಪೊಲೀಸರನ್ನು ಕಣ್ತಿಪ್ಪಿಸಿ ತ್ರಿಬಲ್ ರೈಡಿಂಗ್‌ನಲ್ಲಿ ಕೆಲವು ಪುಂಡರು ಅಲ್ಲಲ್ಲಿ
ಓಡಾಡಿದ್ದು ನಡೆಯಿತು.
ಇಂದಿನಿಂದ ಮಧ್ಯಾಹ್ನ 2ಕ್ಕೆ ಮಂಡಿಪೇಟೆ ಬಂದ್!: ಧಾನ್ಯ ವ್ಯಾಪಾರಿಗಳ ಸಂಘ (ಜಿಎಂಎ)ವು ವ್ಯಾಪಾರ, ವಹಿವಾಟನ್ನು ಜು.13 ರಿಂದ 25 ರವರೆಗೆ ಬೆಳಗ್ಗೆ 8 ರಿಂದ ಮಧ್ಯಾಹ್ನ 2ರವರೆಗೆ ಸೀಮಿತಗೊಳಿಸಲು ನಿರ್ಧರಿಸಿದೆ. ನಗರದ ಮಂಡಿಪೇಟೆ, ಎಪಿಎಂಸಿ ಯಾರ್ಡ್‌ನಲ್ಲಿ ಈ ಅವಧಿಯಲ್ಲಿ ಮಾತ್ರ ವ್ಯಾಪಾರ ವಹಿವಾಟು ನಡೆಯಲಿದೆ. 2 ಬಳಿಕ ಮಂಡಿಪೇಟೆ, ಎಪಿಎಂಸಿ ಸಂಪೂರ್ಣ ಬಂದ್ ಆಗಲಿವೆ. ಅದೇರೀತಿ ಜಿಲ್ಲಾ ಆಟೋಮೊಬೈಲ್ಸ್ ಡೀಲರ್ಸ್ ಕೂಡ ಪ್ರತಿದಿನ ಸಂಜೆ 4ಕ್ಕೆ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ.