ಸಂಡೇ ಲಾಕ್‌ಡೌನ್‌ಗೆ ಜನತೆಯ ಸ್ಪಂದನೆ

web2
Published on

ಕೋಲಾರ: ಕರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೂರನೇ ಭಾನುವಾರವೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಜಿಲ್ಲೆಯಾದ್ಯಂತ ಕರೊನಾ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಜನತೆ ಸಂಡೇ ಲಾಕ್‌ಡೌನ್‌ಗೆ ಮನಸ್ಸು ಮಾಡಿದ್ದರು. ಅಂಗಡಿ ಮುಂಗಟ್ಟುಗಳು, ಹೋಟೆಲ್, ಮದ್ಯದಂಗಡಿ ಬಾಗಿಲು ತೆರೆದಿರಲಿಲ್ಲ. ಔಷಧಾಲಯ, ನಂದಿನಿ ಪಾರ್ಲರ್, ಹಣ್ಣು ತರಕಾರಿ ಮತ್ತು ಮಾಂಸದ ಅಂಗಡಿ ತೆರೆದಿದ್ದವು. ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳು ಲಭ್ಯವಿತ್ತು.

ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸ್ಥಬ್ಧವಾಗಿತ್ತು. ಆಟೋ, ಟ್ಯಾಕ್ಸಿ ಸಂಚಾರವಿರಲಿಲ್ಲವಾದರೂ ಬೆರಳೆಣಿಕೆ ಸಂಖ್ಯೆಯಲ್ಲಿ ವಾಹನಗಳ ಓಡಾಟ ಕಂಡುಬಂದಿತ್ತು. ಬೈಕ್ ಸಂಚಾರ ಎಂದಿಗಿಂತ ಕಡಿಮೆಯಿತ್ತು. ಈ ಭಾನುವಾರವೂ ನಗರದ ಟೇಕಲ್ ರಸ್ತೆಯ ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ಪೊಲೀಸರು ತಡೆಬೇಲಿ ಕಟ್ಟಿದ್ದರೂ ಸವಾರರು ಓಡಾಟಕ್ಕೆ ದಾರಿ ಮಾಡಿಕೊಂಡಿದ್ದರಿಂದ ಪೊಲೀಸರು ಕೂಡ ಕೈ ಚೆಲ್ಲಬೇಕಾಗಿ ಬಂತು.

ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಲಾಕ್‌ಡೌನ್ ಪರಿಣಾಮಕಾರಿಯಾಗಿ ನಡೆದರೆ ಸಂಜೆಯಾಗುತ್ತಲೇ ವಾಹನಗಳ ಓಡಾಟ ಕಂಡುಬಂದಿತ್ತಾದರೂ ಮಧ್ಯಾಹ್ನ 2.50ರಿಂದ ಎರಡು ಗಂಟೆಗೂ ಅಧಿಕ ಸಮಯ ಭಾರಿ ಮಳೆಯಾದ್ದರಿಂದ ಬೈಕ್‌ಗಳ ಓಡಾಟಕ್ಕೆ ಬ್ರೇಕ್ ಬಿದ್ದಿತ್ತು.

ಎಪಿಎಂಸಿಯಲ್ಲಿ ವಹಿವಾಟು:

ಸಂಡೇ ಲಾಕ್‌ಡೌನ್ ನಡುವೆಯೂ ರೈತರ ಹಿತದೃಷ್ಠಿಯಿಂದ ಕೋಲಾರ ಎಪಿಎಂಸಿಯಲ್ಲಿ ವಹಿವಾಟು ಅಬಾಧಿತವಾಗಿತ್ತು. ಹಿಂದಿನ ದಿನಕ್ಕಿಂತ ಸರಿಸುಮಾರು ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಅಂದರೆ 8767 ಕ್ವಿಂಟಾಲ್ ಟೊಮ್ಯಾಟೊ ಅವಕ ಆಗಿತ್ತು. ಹುರುಳಿ 42 ಕ್ವಿಂಟಾಲ್, ಬೀಟ್ರೋಟ್ 30 ಕ್ವಿಂಟಾಲ್, ಎಲೆಕೋಸು 55 ಕ್ವಿಂಟಾಲ್, ಹೂಕೋಸು 50 ಕ್ವಿಂಟಾಲ್ ಚಪ್ಪರದವರೆ 15 ಕ್ವಿಂಟಾಲ್, ಬಜ್ಜಿಮೆಣಸಿನಕಾಯಿ 27 ಕ್ವಿಂಟಾಲ್, ಕ್ಯಾರೇಟ್ 35 ಕ್ವಿಂಟಾಲ್, ಮೂಲಂಗಿ 15 ಕ್ವಿಂಟಾಲ್ ಹೊರತುಪಡಿಸಿ ಇತರ ತರಕಾರಿ ಅವಕ ಒಂದಂಕ್ಕಿ ದಾಟಲಿಲ್ಲ.

ಮಾಂಸ ಖರೀದಿ ಜೋರು: ಸಂಡೇ ಲಾಕ್‌ಡೌನ್ ನಡುವೆಯೂ ಮಾಂಸದ ವಹಿವಾಟು ಜೋರಾಗಿ ನಡೆಯಿತು. ಜು 21ರಿಂದ ಶ್ರಾವಣ ಮಾಸ ಆರಂಭವಾಗುತ್ತಿರುವುದರಿಂದ ಈ ಮಾಸದಲ್ಲಿ ಅನೇಕರು ಮಾಂಸ ಸೇವನೆ ವರ್ಜಿಸುತ್ತಾರೆ. ಹಾಗಾಗಿ ಭಾನುವಾರ ಜನತೆ ಮಾಂಸ ಖರೀದಿಗೆ ಮುಗಿ ಬಿದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net