

ಕೋಲಾರ: ಕರೊನಾ ಸೊಂಕುನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಕೈಗೊಂಡಿರುವ ಸಂಪೂರ್ಣ ಲಾಕ್‌ಡೌನ್‌ಗೆ ಎರಡನೇ ಭಾನುವಾರ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಸಕಾರಣವಿಲ್ಲದೆ ಬೈಕ್ ಸವಾರಿ ಮಾಡುತ್ತಿದ್ದವರು ಲಾಠಿ ರುಚಿಯನ್ನೂ ನೋಡುವಂತಾಯಿತು.
ಸಂಡೇ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟು, ಹೋಟೆಲ್, ಮದ್ಯದಂಗಡಿಗಳ ಬಾಗಿಲು ತೆರೆದಿರಲಿಲ್ಲ. ಔಷಧಾಲಯ, ನಂದಿನಿ ಪಾರ್ಲರ್, ಹಣ್ಣು, ತರಕಾರಿ ಅಂಗಡಿಗಳು, ಮಾಂಸದಂಗಡಿ ತೆರೆದಿದ್ದವು. ಆಸ್ಪತ್ರೆಗಳಲ್ಲಿ ತುರ್ತು ಸೇವೆ ಲಭ್ಯವಿತ್ತು.
ಕೆಎಸ್‌ಆರ್‌ಟಿಸಿ ಬಸ್‌ಗಳು ಡಿಪೋ ಬಿಟ್ಟು ಹೊರಬರದಿದ್ದರಿಂದ ಬಸ್ ನಿಲ್ದಾಣವೂ ಬಿಕೋ ಎನ್ನುತ್ತಿತ್ತು. ಆಟೋ, ಟ್ಯಾಕ್ಸಿ, ಕಾರುಗಳ ಸಂಚಾರ ಇರಲಿಲ್ಲವಾದರೂ ಬೆರಳೆಣಿಕೆ ಸಂಖ್ಯೆಯಲ್ಲಿ ಓಡಾಟ ಕಂಡುಬಂತು. ನಗರದಲ್ಲಿ ಬಹುತೇಕ ಕಡೆ ಬೈಕುಗಳ ಸಂಚಾರಕ್ಕೆ ಅಡ್ಡಿ ಇರದಿದ್ದರೂ ಸಂಚಾರದ ಪ್ರಮಾಣ ಎಂದಿಗಿಂತ ಕಡಿಮೆ ಇತ್ತು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಲಾಕ್‌ಡೌನ್ ಪರಿಣಾಮಕಾರಿಯಾಗಿ ನಡೆದರೆ ಸಂಜೆಯಾಗುತ್ತಲೇ ವಾಹನಗಳ ಓಡಾಟ ಹೆಚ್ಚು ಕಂಡುಬಂತು. ಜಾಲಿರೈಡ್ ಹೊರಟ ಕೆಲವರಿಗೆ ನಗರದ ಬೃಂದಾವನ ಸರ್ಕಲ್ ಬಳಿ ಪೊಲೀಸರು ಲಾಠಿ ರುಚಿ ತೋರಿಸಿ ಮನೆ ಕಡೆ ದಾರಿ ತೋರಿಸಿದರು.
ಎಪಿಎಂಸಿ ಬಂದ್: ಸಂಡೇ ಲಾಕ್‌ಡೌನ್ ನಡುವೆಯೂ ರೈತರ ಹಿತದೃಷ್ಟಿಯಿಂದ ಕಳೆದ ಭಾನುವಾರ ಕೋಲಾರ ಎಪಿಎಂಸಿಯಲ್ಲಿ ವಹಿವಾಟು ಅಬಾಧಿತವಾಗಿತ್ತು. ಎಪಿಎಂಸಿ ಮಂಡಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಇಡೀ ಪ್ರಾಂಗಣವನ್ನು ಸ್ಯಾನಿಟೈಸ್ ಮಾಡುವ ಸಲುವಾಗಿ ಭಾನುವಾರ ಮಾರುಕಟ್ಟೆಯನ್ನು ಲಾಕ್‌ಡೌನ್ ಮಾಡಲಾಗಿತ್ತು. ಸುಮಾರು 19 ಎಕರೆ ವಿಸ್ತೀರ್ಣವಿರುವ ಪ್ರಾಂಗಣದಲ್ಲಿ ಎಪಿಎಂಸಿ ಅಧ್ಯಕ್ಷ ಮಂಜುನಾಥ ಕೆ.ಗೌಡ, ಕಾರ್ಯದರ್ಶಿ ಟಿ.ಎಸ್.ರವಿಕುಮಾರ್ ಹಾಗೂ ಸಮಿತಿ ಸದಸ್ಯರ ಉಸ್ತುವಾರಿಯಲ್ಲಿ ಸುರಕ್ಷತಾ ಕಿಟ್ ಧರಿಸಿ ಬೆಳಗ್ಗೆಯಿಂದಲೇ ಮಂಡಿಗಳು, ಹರಾಜು ಕಟ್ಟೆಗಳಿಗೆ ಸೋಂಕು ನಿವಾರಕ ಸಿಂಪಡಿಸಿದರಲ್ಲದೆ ಕೊಳೆತು ರಾಶಿ ಬಿದ್ದಿದ್ದ ಟೊಮ್ಯಾಟೊ ಇನ್ನಿತರ ತರಕಾರಿಗಳನ್ನು ಜೆಸಿಬಿ ಸಹಾಯದಿಂದ ವಿಲೇವಾರಿ ಮಾಡಿ ಸೋಮವಾರದ ವಹಿವಾಟಿಗೆ ಸಜ್ಜುಗೊಳಿಸಲಾಯಿತು.
ಕಳ್ಳದಾರಿ ಹಿಡಿದ ಸವಾರರು: ನಗರದ ಟೇಕಲ್ ರಸ್ತೆಯ ವೇಣುಗೋಪಾಲಸ್ವಾಮಿ ಪುಷ್ಕರಣಿ ಬಳಿ ರಸ್ತೆಗೆ ಅಡ್ಡಲಾಗಿ ತಡೆಬೇಲಿ ನಿರ್ಮಿಸಿ ಸಂಚಾರ ಸಂಪೂರ್ಣ ನಿರ್ಬಂಧಿಸಿ ಪೊಲೀಸ್ ಕಾವಲು ಹಾಕಲಾಗಿತ್ತು. ಹಾಗಾಗಿ ಪಿ.ಸಿ.ಬಡಾವಣೆ, ಪೇಟೆಚಾಮನಹಳ್ಳಿ, ಹೊರವಲಯದ ಬೆಗ್ಲಿಹೊಸಹಳ್ಳಿ, ಮುದುವತ್ತಿ ಸುತ್ತಮುತ್ತಲ ಹಳ್ಳಿಗಳಿಗೆ ಹಾಗೂ ಟೇಕಲ್ ಕಡೆಗೆ ಪ್ರಯಾಣಿಸುವ ಸವಾರರು ತಡೆಬೇಲಿ ದಾಟಲು ಕಳ್ಳ ಮಾರ್ಗ ಕಂಡುಕೊಂಡು ಗೋಕುಲ್ ಕಾಲೇಜು ರಸ್ತೆ, ಕ್ಲಾಕ್ ಟವರ್ ಬಳಿಯ ರೈಲ್ವೆ ಅಂಡರ್ ಪಾಸ್ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿ 75ರ ಸೇವಾ ರಸ್ತೆ ಬಳಸಿಕೊಂಡು ಸಾಗುತ್ತಿದ್ದ ದೃಶ್ಯ ಕಂಡುಬಂತು.