

ಮುಧೋಳ: ಸಮಸ್ಯೆ ಹೇಳಿಕೊಳ್ಳಲು ನಗರಸಭೆ ಅಧ್ಯಕ್ಷರಿಗೆ ಕರೆ ಮಾಡಿದರೆ ಅವರ ಮನೆಯವರು ಕರೆ ಸ್ವೀಕರಿಸಿ ಸಮಜಾಯಿಷಿ ನೀಡುತ್ತಾರೆ. ಕಚೇರಿಯಲ್ಲಿ ಭೇಟಿಯಾಗಲು ತೆರಳಿದರೆ ಅವರ ವಾಹನ ಚಾಲಕ ಉತ್ತರ ನೀಡುತ್ತಾರೆ. ಈ ವ್ಯವಸ್ಥೆ ಬದಲಾಗಬೇಕು ಎಂದು ಸದಸ್ಯೆ ಯಲ್ಲವ್ವ ಅಂಬಿ ಅಧ್ಯಕ್ಷರ ವಿರುದ್ಧ ಆರೋಪ ಮಾಡಿದರು.
ನಗರಸಭೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ ಯಲ್ಲವ್ವ, ನನ್ನ ವಾರ್ಡ್‌ನಲ್ಲಿ ರಸ್ತೆ ದುರಸ್ತಿಗೆ ಗರಸು ಹಾಕಿ ತುಂಬ ದಿನಗಳಾಗಿವೆ. ನಗರಸಭೆಯಿಂದ ಜೆಸಿಬಿ ಕಳುಹಿಸಿ ಸಮತಟ್ಟು ಮಾಡಲು ಹೇಳಿದರೆ ಇದುವರೆಗೂ ಜೆಸಿಬಿ ಕಳಿಸಿಲ್ಲ. ಈ ಬಗ್ಗೆ ಅಧ್ಯಕ್ಷರನ್ನು ಕೇಳಲು ಮುಂದಾದರೆ ನಮಗೆ ಬೇರೆಯವರು ಉತ್ತರ ನೀಡುತ್ತಾರೆ ಎಂದು ಅಸಮಾಧಾನ ಹೊರಹಾಕಿದನು. ಅವರೊಂದಿಗೆ ಧ್ವನಿಗೂಡಿಸಿದ ಇನ್ನುಳಿದ ಸದಸ್ಯರೂ ನಮ್ಮ ಕೆಲಸಗಳಿಗೆ ಅಧ್ಯಕ್ಷರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯಿಸಿದ ಅಧ್ಯಕ್ಷೆ ಸುನಂದಾ ತೇಲಿ, ಇನ್ನು ಮುಂದೆ ಹೀಗಾಗದಂತೆ ಜಾಗ್ರತೆ ವಹಿಸಲಾಗುವುದು ಎಂದು ಸಮಜಾಯಿಷಿ ನೀಡಿದರು. ನಂತರ ಸಭೆ ಮುಂದುವರಿಯಿತು.
ಡಾ. ಸತೀಶ ಮಲಘಾಣ ಮಾತನಾಡಿ, ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಸಂಪೂರ್ಣ ವೈಲ್ಯವಾಗಿದ್ದು, ಅದನ್ನು ಶೀಘ್ರ ಸರಿಪಡಿಸಿ ಎಂದು ಆಗ್ರಹಿಸಿದರು.
ಪೌರಾಯುಕ್ತ ಗೋಪಾಲ ಖಾಸೆ ಮಾತನಾಡಿ, ಬೀದಿ ದೀಪ ನಿರ್ವಹಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆಗೆ ನಿವಾರಣೆ ಸೂಕ್ತ ಕ್ರಮವಹಿಸಿ ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿ, ಸದಸ್ಯರಿಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ನಗರಕ್ಕೆ ಸಂಪರ್ಕ ಕಲ್ಪಿಸುವ ಹೊರವಲಯದ ಮುಖ್ಯ ರಸ್ತೆಯಲ್ಲಿ ಸ್ವಾಗತ ಕಮಾನು ಅಳವಡಿಕೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಅರ್ಜಿ ಕೊಟ್ಟ ಸಾರ್ವಜನಿಕರ ಫೈಲ್‌ಗೆ ದುಡ್ಡು ಪಡೆದು ಕೆಲಸ ಮಾಡಿಕೊಡಲಾಗುತ್ತಿದೆ ಎಂದು ಬಿಜೆಪಿಯ ಗುರುಪಾದ ಕುಳಲಿ ಆರೋಪಿಸಿದರು. ಪ್ರತಿಕ್ರಿಯಿಸಿದ ಪೌರಾಯುಕ್ತ, ಇ ಖಾತಾ ನೋಂದಣಿಗೆ ಇರುವ ಸುಲಭ ಮಾರ್ಗೋಪಾಯ ಹಾಗೂ ಮುಂದೆ ನಗರಸಭೆಯಲ್ಲಿ ಸಾರ್ವಜನಿಕ ಸ್ನೇಹಿ ಕಾರ್ಯವೈಖರಿ ಬಗ್ಗೆ ಸ್ಪಷ್ಟವಾಗಿ ತಿಳಿಸಿದರು.
ಬೀದಿ ನಾಯಿ ಸಂತಾನಶಕ್ತಿ ಹರಣ ಚಿಕಿತ್ಸೆ ಬಗ್ಗೆ ಮಾಹಿತಿ ಹಂಚಿಕೊಂಡ ಪೌರಾಯುಕ್ತರು, ಇದುವರೆಗೆ 278 ನಾಯಿಗಳ ಸಂತಾನಶಕ್ತಿ ಹರಣ ಮಾಡಲಾಗಿದೆ. ಒಟ್ಟು 1388 ನಾಯಿಗಳನ್ನು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಗುರುತಿಸಲಾಗಿದ್ದು, ಮುಂಬರುವ ದಿನದಲ್ಲಿ ಈ ಕಾರ್ಯ ಎಂದಿನಂತೆ ಸಾಗುತ್ತದೆ ಎಂದು ತಿಳಿಸಿದರು.
ಹೈಮಾಸ್ಟ್ ದೀಪ ಅಳವಡಿಕೆ, ಶೌಚಗೃಹ ನಿರ್ಮಾಣ, ಪಶು ಆಸ್ಪತ್ರೆಯಲ್ಲಿ ಅಂಗವಿಕಲರಿಗಾಗಿ ರ‌್ಯಾಂಪ್ ನಿರ್ಮಾಣಕ್ಕೆ ಒಂದು ಲಕ್ಷ ರೂ. ಅನುದಾನ ಮೀಸಲು ಸೇರಿ ವಿವಿಧ ಕೆಲಸಗಳಿಗೆ ಅನುಮೋದನೆಗೆ ಸದಸ್ಯರ ಗಮನಕ್ಕೆ ತರಲಾಯಿತು.
ಸದಸ್ಯರಾದ ಸುರೇಶ ಕಾಂಬಳೆ, ಸೈದು ಬಂಡಿವಡ್ಡರ, ಸಂತೋಷ ಪಾಲೋಜಿ, ವಿನೋದ ಕಲಾಲ, ಸುನೀಲ ನಿಂಬಾಳಕರ, ಕುಮಾರ ಪಾರ ಹಾಜರಿದ್ದರು.
ಸದಸ್ಯೆಯೊಬ್ಬರು ತಮಗೆ ನೀಡಬೇಕಾದ ಪರ್ಸೆಂಟೇಜ್ ನೀಡಿ ನಿಮ್ಮ ಕೆಲಸ ಮಾಡಿಕೊಳ್ಳಿ ಎಂಬ ಹೇಳಿಕೆ ಕೆಲ ಹೊತ್ತು ಚರ್ಚೆಗೆ ಗ್ರಾಸವಾಯಿತು. ತನ್ನ ವಾರ್ಡ್‌ನಲ್ಲಿನ ಕೆಲಸದ ಬಿಲ್ ನೀಡಿರುವ ಬಗ್ಗೆ ತಕರಾರು ಎತ್ತಿದ ಸದಸ್ಯೆ, ಅಲ್ಲಿ ಕೆಲಸವೇ ಆಗಿಲ್ಲ. ಆದರೂ ಬಿಲ್ ತೆಗೆಯಲಾಗಿದೆ. ಬರಬೇಕಾದ ಪರ್ಸೆಂಟೇಜ್ ನೀಡಿ ಬಿಲ್ ಹಾಕಿಕೊಳ್ಳಿ ಎಂಬ ಮಾತು ಎಲ್ಲರನ್ನೂ ಚಕಿತಗೊಳಿಸಿತು. ಬಳಿಕ ಕೆಲ ಹಿರಿಯ ಸದಸ್ಯರು ಮಹಿಳಾ ಸದಸ್ಯೆಗೆ ತಿಳಿಹೇಳಿ ಸಭೆ ಹತೋಟಿಗೆ ತಂದರು.