

ಮಂಡ್ಯ: ಕೆಆರ್‌ಎಸ್ ಅಣೆಕಟ್ಟೆ ಪ್ರದೇಶದಲ್ಲಿ ರಾಜ್ಯಸರ್ಕಾರ ಖಾಸಗಿ ಸಹಭಾಗಿತ್ವದಲ್ಲಿ 35 ವರ್ಷದ ಗುತ್ತಿಗೆಗೆ ಆಯೋಜನೆ ಮಾಡಲು ನಿರ್ಧಾರ ಮಾಡಿರುವ 2,663 ಕೋಟಿ ರೂ ವೆಚ್ಚದ ಅಮ್ಯೂಸ್ಮೆಂಟ್ ಪಾರ್ಕ್ ಯೋಜನೆ ಹಾಗೂ 100 ಕೋಟಿ ರೂ ವೆಚ್ಚದ ಕಾವೇರಿ ಆರತಿ ಯೋಜನೆ ಮಾರಕ ಹಾಗೂ ಅಪಾಯಕಾರಿ ಎಂದು ರೈತ ಹೋರಾಟಗಾರ್ತಿ ಸುನಂದಾ ಜಯರಾಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಯೋಜನೆಗಳನ್ನು ನಿಷೇಧಿತ ಪ್ರದೇಶದಲ್ಲಿ ಮಾಡಬಾರದು. ಈಗಾಗಲೇ ಹೈಕೋರ್ಟ್ ಅಣೆಕಟ್ಟೆಯ ಸುತ್ತ 20 ಕಿ.ಮೀ ವ್ಯಾಪ್ತಿಯನ್ನು ನಿಷೇಧಿಸಿದ ಪ್ರದೇಶವೆಂದು ಘೋಷಣೆ ಮಾಡಿದೆ. ಮುಖ್ಯವಾಗಿ 120 ವರ್ಷದ ಡ್ಯಾಂನ ಭದ್ರತೆಗೆ ತೀವ್ರ ಧಕ್ಕೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಖಾಸಗಿ ಬಂಡವಾಳಿಗರು ಶಾಶ್ವತವಾಗಿ ಅಣೆಕಟ್ಟೆ ಒಳಗೊಂಡಂತೆ ಡ್ಯಾಂ ಪ್ರದೇಶವನ್ನು ಕಬಳಿಸುತ್ತಾರೆ. ನೀರಾವರಿ ಪ್ರದೇಶವಾದ ಶ್ರೀರಂಗಪಟ್ಟಣ, ಪಾಂಡವಪುರ ತಾಲೂಕಿನ 100 ಹಳ್ಳಿಗಳ ಕೃಷಿ ಬದುಕು, ಜನಗಳ ಸಾಮಾಜಿಕ ಬದುಕು ಪಲ್ಲಟವಾಗುತ್ತದೆ. ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ರೂಪಿಸಿ ನಿರ್ಮಾಣ ಮಾಡಿರುವ ಅಣೆಕಟ್ಟೆ ಕೃಷಿ ಬದುಕಿಗಾಗಿಯೇ ಹೊರತು ಮೋಜು, ಮಸ್ತಿ, ಪ್ರವಾಸೋದ್ಯಮ, ವ್ಯಾಪಾರ ಮಾಡಲು ಅಲ್ಲ. ಮಹಾರಾಜರ ಆಲೋಚನೆ, ದೂರದೃಷ್ಟಿಗೆ ಸರ್ಕಾರ ಮಸಿ ಬಳಿಯುವ ಕೆಲಸ ಮಾಡುತ್ತಿದೆ. ಅಣೆಕಟ್ಟೆಯ ಪ್ರದೇಶದಲ್ಲಿ ಕೃಷಿ ಅಭಿವೃದ್ಧಿ, ನೀರಾವರಿ ಅಭಿವೃದ್ಧಿ ಯೋಜನೆಯನ್ನು ಸರ್ಕಾರ ರೂಪಿಸಬೇಕಿತ್ತು. 120 ವರ್ಷದ ಡ್ಯಾಂಗೆ ಸಮನಾಂತರವಾಗಿ ಹೊಸ ಅಣೆಕಟ್ಟೆ ನಿರ್ಮಿಸಬೇಕೆಂಬ ಆಲೋಚನೆಯನ್ನು ರಾಜ್ಯ ಸರ್ಕಾರ ಮಾಡಬೇಕಿತ್ತು. ಆದರೆ ಮಾರಕ ಯೋಜನೆ ಜಾರಿಗೆ ಮುಂದಾಗಿದೆ. ಆದ್ದರಿಂದ ಇದರ ವಿರುದ್ಧ ಸಾಮಾಜಿಕ ಹಾಗೂ ಕಾನೂನು ಹೋರಾಟ ಮಾಡಲಾಗುವುದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.