ಗ್ರಾಮದಲ್ಲಿ ಬಸ್ ನಿಲುಗಡೆಗೆ ಒತ್ತಾಯ

chn may 21 sunagere. (1)
Published on

ಚನ್ನಗಿರಿ: ಗ್ರಾಮದಲ್ಲಿ ಬಸ್​ಗಳನ್ನು ನಿಲ್ಲಸದಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ ಪ್ರತಿಯೊಂದು ಬಸ್​ಗಳನ್ನು ಕಡ್ಡಾಯವಾಗಿ ನಿಲ್ಲಿಸುವಂತೆ ಒತ್ತಾಯಿಸಿ ಗುರುವಾರ ಗ್ರಾಮಸ್ಥರು ಸುಣಗೆರೆ ಬಸ್ ತಂಗುದಾಣದ ಬಳಿ ಪ್ರತಿಭಟನೆ ನಡೆಸಿದರು.

ಪ್ರತಿಭಟನಾಕಾರರು ಬೆಳಗ್ಗೆ, ಸರ್ಕಾರಿ ಬಸ್ ನಿಲ್ಲಿಸಿ ನಿಲುಗಡೆಗೆ ಅವಕಾಶವಿದೆ ಎಂದು ಚಾಲಕ ಹಾಗೂ ನಿರ್ವಾಹಕರಿಗೆ ಮನವಿ ಮಾಡಿಕೊಂಡರು. ಆದರೆ ಅವರು ಇಲಾಖೆಯಿಂದ ಆದೇಶ ಬರುವವರೆಗೆ ನಿಲ್ಲಿಸಲು ಆಗುವುದಿಲ್ಲ ಎಂದಾಗ ಗ್ರಾಮಸ್ಥರೆಲ್ಲ ಸೇರಿ ಶಿವಮೊಗ್ಗ ಹಾಗೂ ಚನ್ನಗಿರಿಯಿಂದ ಬರುವ ಎಲ್ಲ ಬಸ್​ಗಳನ್ನು ತಡೆದು ನಿಲ್ಲಿಸಿದರು. ಇದರಿಂದ ಬೆಳಗ್ಗೆ 8 ರಿಂದ 10 ಗಂಟೆಯವರೆಗೆ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಬಸ್​ನಲ್ಲಿದ್ದ ಪ್ರಯಾಣಿಕರು ಪ್ರತಿಭಟನಾಕಾರರಲ್ಲಿ ಮನವಿ ಮಾಡಿಕೊಂಡರೂ ಬಿಡದೆ ಪ್ರತಿಭಟನೆಯನ್ನು ಮುಂದುವರಿಸಿದರು.

ಈ ವೇಳೆ ಮುಖಂಡ ಮೋಹನ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗಿರುವ ಸುಣಗೆರೆ ಗ್ರಾಮದ ಮಾರ್ಗದಲ್ಲಿ ಶಿವಮೊಗ್ಗ ಮತ್ತು ಚಿತ್ರದುರ್ಗದ ಕಡೆಗಳಿಂದ ಬಸ್​ಗಳು ಓಡಾಡುತ್ತವೆ. ಆದರೆ ಒಂದು ನಿಲುಗಡೆಯೂ ಇಲ್ಲ. ಶಿವಮೊಗ್ಗದಿಂದ ಬಂದ ಪ್ರಯಾಣಿಕರನ್ನು ಮಾತ್ರ ಇಳಿಸಿ ಹೋಗುತ್ತಾರೆ ಎಂದರು.

ಗ್ರಾಮದಿಂದ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ, ಪಟ್ಟಣಕ್ಕೆ ಹೋಗುವ ವ್ಯವಹಾರಸ್ಥರಿಗೆ, ಸರ್ಕಾರಿ ಹಾಗೂ ಖಾಸಗಿ ಕೆಲಸದಾರರಿಗೆ ತೊಂದರೆಯಾಗುತ್ತಿದೆ. ಖಾಸಗಿ ಬಸ್ ಮಾಲೀಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಕೆಎಸ್​ಆರ್​ಟಿಸಿ ಡಿಪೋ ಮ್ಯಾನೇಜರ್ ಸ್ಥಳಕ್ಕೆ ಆಗಮಿಸಿ ಕೋರಿಕೆ ನಿಲುಗಡೆಗಾಗಿ ಅವಕಾಶವನ್ನು ಮತ್ತು ಆದೇಶ ಪ್ರತಿಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.

ಮಲ್ಲಿಕಾರ್ಜುನ್, ಪ್ರಕಾಶ್, ಪರಮೇಶ್, ಯಶೋದಾ, ಪ್ರೇಮಾ, ದೀಪಾ, ಇಂದ್ರಮ್ಮ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net