

ಮಂಡ್ಯ: ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಕೊತ್ತತ್ತಿ ಹೋಬಳಿಯ ಸೂನಗಹಳ್ಳಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾದರು.
ಪಕ್ಷದ ತತ್ವ ಸಿದ್ಧಾಂತ ಹಾಗೂ ಜನಪರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬೆಂಬಲ ಸೂಚಿಸಿ ಬಿಜೆಪಿಗೆ ಬಂದವರನ್ನು ಯುವ ಮುಖಂಡ ಇಂಡುವಾಳು ಸಚ್ಚಿದಾನಂದ ಪಕ್ಷದ ಶಾಲು ಹೊದಿಸಿ ಸ್ವಾಗತಿಸಿದರು.
ಬಳಿಕ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ರಾಜ್ಯಸರ್ಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳನ್ನು ನಿಲ್ಲಿಸಿ ಬಡವರು ಹಾಗೂ ರೈತರಿಗೆ ಅನ್ಯಾಯ ಮಾಡಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯವನ್ನು ನಿರ್ಲಕ್ಷೃ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಲು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಬಡವರಿಗೆ ಹಂಚಿಕೆಯಾಗಬೇಕಾದ ಮನೆಯನ್ನು ಹಣಕ್ಕೆ ಮಾರಿಕೊಳ್ಳುತ್ತಿದ್ದಾರೆ. ರಾಜ್ಯಸರ್ಕಾರದ ಭ್ರಷ್ಟಾಚಾರವನ್ನು ಅವರ ಪಕ್ಷದ ಹಿರಿಯ ಶಾಸಕ ಬಯಲು ಮಾಡಿದ್ದಾರೆ. ಇದಕ್ಕಿಂತಲೂ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದರು.
ರಾಜ್ಯಸರ್ಕಾರದಲ್ಲಿ ಲಂಚಕೊಡದೇ ಯಾವುದೇ ಕೆಲಸವಾಗುತ್ತಿಲ್ಲ. ಇದರಿಂದಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಅಭಿವೃದ್ಧಿ ಎನ್ನುವುದು ಕಾಂಗ್ರೆಸ್ ನಾಯಕರ ಭಾಷಣಕ್ಕೆ ಸೀಮಿತವಾಗಿದೆ. ರಾಜ್ಯಸರ್ಕಾರದ ದುರಾಡಳಿತಕ್ಕೆ ಜನರೇ ಮುಂದೆ ಪಾಠ ಕಲಿಸುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತವನ್ನು ಮೆಚ್ಚಿ ಹಲವರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿಯೂ ಜನರು ಬಿಜೆಪಿ ಪಕ್ಷ ಸೇರ್ಪಡೆಗೆ ಮುಂದಾಗಿದ್ದು, ಮುಂದಿನ ದಿನದಲ್ಲಿ ಈ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಲಿದೆ ಎಂದರು.
ಸೂನಗಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುರೇಶ್, ಜಗದೀಶ್, ಕುಮಾರ್(ಡೇರಿ), ಅಶೋಕ್, ಕಿರಣ್, ದಿನೇಶ್, ಮನು, ಅನಿಲ್, ಯೋಗೇಶ್, ಎಸ್.ಎನ್.ಕೃಷ್ಣ, ಅಣ್ಣಯ್ಯ, ರಘು, ಸೂರ್ಯ, ರಾಮಚಂದ್ರ, ಕೃಷ್ಣ(ಟ್ರಾೃಕ್ಟರ್), ನಿಂಗಣ್ಣ, ಶಿವರಾಜು, ವರದೇಗೌಡ, ಲಕ್ಷ್ಮಣ, ವರದ, ರಮೇಶ್, ಸುನೀಲ್, ಮಂಜು, ದೇವರಾಜ್, ಜವರ, ಶಂಕರ್, ಮಲ್ಲೇಶ್, ಮಹದೇವ, ಮಹೇಶ್, ರಮೇಶ್, ಜಯರಾಂ, ಸೋಮಶೇಖರ್, ಸಂತು ಇತರರಿದ್ದರು.