ಬಿಸಿಲ ಧಗೆ ತಣಿಸಿದ ಧಾರಾಕಾರ ಮಳೆ

31manju7b
ರವಿವಾರ ಪೇಟೆ ವೃತ್ತದ ರಸ್ತೆ ನೀರಿನಿಂದ ಆವೃತ ಆಗಿರುವುದು.
Published on

ಬೆಳಗಾವಿ: ಬಿಸಿಲಿನಿಂದ ಬಸವಳಿದಿದ್ದ ಜನಕ್ಕೆ ಸೋಮವಾರ ಸುರಿದ ಮಳೆ ಹಿತಾನುಭವ ನೀಡಿತು. ಇದರೊಟ್ಟಿಗೆ ನಗರದ ಹೊರವಲಯ ಪ್ರದೇಶ ಹಾಗೂ ಮಾರುಕಟ್ಟೆಗ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿತು.

ಒಂದು ಗಂಟೆಗೂ ಅಕ ಕಾಲ ಸುರಿದ ಮಳೆಯಿಂದ ಚರಂಡಿಗಳು ಬ್ಲಾಕ್, ನಾಲಾಗಳ ಕುಸಿತ, ಮರಗಳು ಧರೆಗೆ ಉರುಳಿ ನಾನಾ ಸಮಸ್ಯೆಗಳಿಂದ ಜನರು ಸಂಕಷ್ಟಕ್ಕೆ ಸಿಲುಕಿದರು. ಮತ್ತೊಂದೆಡೆ ಬಿಜೆಪಿ ಶಾಸಕರ ಕಚೇರಿ ಬಳಿಯೇ ನಾಲಾ ಕುಸಿದು ಬಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.

ಮಹಾನಗರಲ್ಲಿ ಒಂದೂವರೆ ಗಂಟೆ ಸುರಿದ ಭಾರಿ ಮಳೆ, ಗಾಳಿ, ಗುಡುಗು ಸಿಡಿಲಿಗೆ ವಿದ್ಯುತ್ ತಂತಿಗಳು, ಮರದ ರೆಂಬೆ, ಕೊಂಬುಗಳು ನೆಲಕ್ಕೆ ಉರುಳಿ ಬಿದ್ದಿದ್ದು, ಒಂದೆಡೆಯಾದರೆ ಚರಂಡಿ, ನಾಲಾಗಳು ಬ್ಲಾಕ್ ಆಗಿ ಮಳೆ, ಚರಂಡಿ ನೀರು ರಸ್ತೆಯ ಮೇಲೆ ಹರಿದು ಸಮಸ್ಯೆ ಸೃಷ್ಟಿಸಿತು. ತಗ್ಗು ಪ್ರದೇಶಗಳಲ್ಲಿನ ಮನೆ, ಅಂಗಡಿಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟು ಮಾಡಿತು.

ಮಹಾನಗರ ಪಾಲಿಕೆ, ದಂಡು ಮಂಡಳಿ ಅಕಾರಿಗಳು ನಗರದಲ್ಲಿ ಚರಂಡಿ, ಒಳಚರಂಡಿ ಹಾಗೂ ನಾಲಾಗಳ ಸ್ವಚ್ಛತೆ ಮಾಡದಿರುವ ಪರಿಣಾಮ ಬಹುತೇಕ ಚರಂಡಿ, ನಾಲಾಗಳು ಬ್ಲಾಕ್ ಆಗಿ ಅವಾಂತರ ಸೃಷ್ಟಿಸಿದವು. ಹಳೇ ಪಿಬಿ ರಸ್ತೆ ರೈಲ್ವೆ ಸೇತುವೆ ಬಳಿ ನಾಲಾ ಕುಸಿದು ಬಿದ್ದರೆ, ಸಮರ್ಥ ನಗರ ಸೇರಿ ವಿವಿಧೆಡೆ ಮನೆಗಳಿಗೆ ನೀರು ನುಗ್ಗಿತು. ಹಳೇ ಪಿಬಿ ರಸ್ತೆ, ಟಿಳಕವಾಡಿ, ಶಹಾಪುರ, ಹಳೇ ಗಾಂನಗರ, ಶಾಂತಿ ನಗರ, ಶಿವಾಜಿ ಕಾಲನಿ, ಬೆನಕೆ ಬಡಾವಣೆ, ಸಮರ್ಥ ನಗರ, ಮರಾಠಿ ಕಾಲನಿ ಸೇರಿ ಹಲವು ಪ್ರದೇಶಗಳು ಸಮಸ್ಯೆ ಎದುರಿಸಿದವು. ಪರಿಹಾರ ಕಾರ್ಯ ಕೈಗೊಳ್ಳಬೇಕಾಗಿದ್ದ ಪಾಲಿಕೆ ಅಕಾರಿಗಳು ನಿರ್ಲಕ್ಷ ಮಾಡಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು. ಜನ ವಸತಿ, ಮಾರುಕಟ್ಟೆ, ಮುಖ್ಯ ರಸ್ತೆಗಳ ಬದಿಯಲ್ಲಿರುವ ಚರಂಡಿಗಳ ನೀರು ಹರಿದು ಹೋಗಲು ಮಾರ್ಗಗಳು ಇಲ್ಲ. ಪರಿಣಾಮ ಚರಂಡಿ ನೀರು ರಸ್ತೆ ಮೇಲೆ ಹರಿಯಿತು. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು, ವ್ಯಾಪಾರಿಗಳು ಸಮಸ್ಯೆ ಎದುರಿಸಿದರು.

ನಗರದಲ್ಲಿ ಚರಂಡಿ, ನಾಲಾಗಳ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚಿಸಲಾಗಿದೆ. ಹಳೇ ಪಿಬಿ ರಸ್ತೆ ಬಳಿ ಕುಸಿದಿರುವ ನಾಲಾ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಮಳೆಯಿಂದ ಸಮಸ್ಯೆಗಳು ಉಂಟಾದರೆ ಸಾರ್ವಜನಿಕರು ಪಾಲಿಕೆಗೆ ಮಾಹಿತಿ ನೀಡಿದರೆ ತಕ್ಷಣ ಸ್ಪಂದಿಸಲಾಗುವುದು. | ಶುಭ ಬಿ. ಪಾಲಿಕೆ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net