ಒಂಬತ್ತು ‌ಇಲಾಖೆ ವಿರುದ್ದ ಸುಮೋಟೋ ಪ್ರಕರಣ

Published on

ಬಳ್ಳಾರಿ : ಕಳೆದ ಮೂರು ದಿನಗಳಲ್ಲಿ ರಾಜ್ಯ ಲೋಕಾಯುಕ್ತ ಇಲಾಖೆಯು ನಗರದ 17 ಕಡೆ ದಾಳಿ ದಾಳಿಸಿ, ಒಂಬತ್ತು ಇಲಾಖೆಗಳ ವಿರುದ್ಧ ಸ್ವಯಂ ಪ್ರೇರಿತ ದೂರು ( ಸುಮೋಟೋ) ದಾಖಲಿಸಿಕೊಳ್ಳಲಾಗಿದೆ ಎಂದು ರಾಜ್ಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದರು.

ಇಲ್ಲಿನ ಅತಿಥಿ ಗೃಹದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‌ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದರು. ಮಹಾನಗರ ಪಾಲಿಕೆ, ಕೆಐಡಿಬಿ, ಜಿಲ್ಲಾಸ್ಪತ್ರೆ, ಪರಿಸರ ಮಾಲಿನ್ಯ, ಎಪಿಎಂಸಿ ಯಾರ್ಡ್, ತ್ಯಾಜ್ಯ ವಿಲೇವಾರಿ ಘಟಕ, ಆಹಾರ ಸರಬರಾಜು ‌ಇಲಾಖೆ, ಕೆ ಎಸ್ ಎಫ್ ಸಿ ಇಲಾಖೆ ಸೇರಿದಂತೆ ಒಟ್ಟು ಒಂಬತ್ತು ಇಲಾಖೆ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಎಪಿಎಂಸಿ ಯಲ್ಲಿ ರೈತರಿಂದ ಹೆಚ್ಚಿನ ಕಮಿಷನ್ ಸಂಗ್ರಹಿಸುವ ಮೂರು ಮಳಿಗೆಗಳಿಗೆ ಪರವಾನಗಿ ರದ್ದುಗೊಳಿಸುವಂತೆ ಆದೇಶಿಸಲಾಗಿದೆ. ನಗರದ ಹೊರವಲಯದ ಘನ ತ್ಯಾಜ್ಯ ಘಟಕದಲ್ಲಿ 2.64 ಲಕ್ಷ ಟನ್ ತ್ಯಾಜ್ಯ ಸಂಗ್ರಹಗೊಂಡಿದ್ದು, 2008 ರಿಂದ ಈವರೆಗೆ ವಿಲೇವಾರಿಯಾಗಿಲ್ಲ. ಅಲ್ಲದೆ, ಸುತ್ತಲಿನ ವಾತವಾರಣದ ಬಗ್ಗೆ ಪರಿಶೀಲನೆ ಕೈಗೊಳ್ಳದ ಅಧಿಕಾರಿಗಳ ಹಾಗೂ ಇಲಾಖೆ ವಿರುದ್ದ ಕ್ರಮವಹಿಸಲಾಗುವುದು. ತಹಿಸೀಲ್ ಕಚೇರಿ, ಬೆಸ್ಕಾಂ ಇಲಾಖೆಯಲ್ಲಿ ಅಧಿಕಾರಿಗಳು ಮಾಹಿತಿ ಒದಗಿಸಲು ತಡಪಡಿಸುತ್ತಿದ್ದಾರೆ‌. ಕೆಲ ಜೆಸ್ಕಾಂ ಅಧಿಕಾರಿಗಳು ಕೆಲಸಕ್ಕೆ ಬಾರದೆ ಹಾಜರಾತಿ ಪಡೆದಿದ್ದು, ಅಂತಹವರಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಮುಂಡರಗಿ ಪ್ರದೇಶದಲ್ಲಿರುವ 84 ಜೀನ್ಸ್ ಘಟಕಗಳ ಕಾಖಾರ್ನೆಗಳಿಂದ ವಿಷಪೂರಿತ ನೀರು ಹರಿದು ಸುತ್ತಮುತ್ತಲಿನ ಕೃಷಿ ಪ್ರದೇಶ ನಾಶವಾಗುತ್ತಿದೆ. ನಗರದ ಉಗ್ರಾಣಗಳಲ್ಲಿ ಸಾವಿರಾರು ಕಿಂಟ್ವಾಲ್ ನಷ್ಟು ಜೋಳ ಸಾಗಣೆಯಾಗದೆ ಹುಳು ತಿಂದು ಹಾಳಾಗಿದ್ದು , ಇದರ ಬಗ್ಗೆಯೂ ತನಿಖೆ ಜರುಗಿಸಲಾಗುವುದು. ಲೋಕಾಯುಕ್ತ ಇಲಾಖೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಸುಮೋಟೋ ದಾಖಲಾಗಿರುವ ಜಿಲ್ಲೆ ಬಳ್ಳಾರಿಯಾಗಿದೆ. ಈಗಾಗಲೇ ಕಲಬುರಗಿ, ತುಮಕೂರು ಹಾಗೂ ಮಂಗಳೂರು ಕಡೆ ದಾಳಿ ನಡೆಸಿದ್ದು ಅಲ್ಪ ಪ್ರಮಾಣದ ದೂರು ದಾಖಲಾಗಿವೆ. ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರ ವಹಿಸಿಕೊಂಡರೂ ಆಸ್ಪತ್ರೆ ಹಾಗೂ ವಸತಿನಿಲಯಗಳಿಗೆ ಅನುದಾನ ನೀಡುವುದು ಮಾತ್ರ ಕಡಿತಗೊಳಿಸಲ್ಲ. ಆದರೆ, ಇಲಾಖೆಯಲ್ಲಿ ಅಧಿಕಾರಿಗಳ ಭ್ರಷ್ಟಾಚಾರದಿಂದ ಅಭಿವೃದ್ಧಿಯಾಗುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಭೂ ಗಣಿ ವಿಜ್ಞಾನ ಇಲಾಖೆಗೆ ದಾಳಿ ನಡೆಸಿದ್ದ ಮಾಹಿತಿ ಒದಗಿಸಲು ಎರಡು ದಿನ ಕಾಲಾವಕಾಶ ‌ಕೇಳಿದ್ದಾರೆ ಎಂದರು. ಕಳೆದ ಎರಡು ದಿನಗಳಲ್ಲಿ ವಿವಿಧ ಇಲಾಖೆ ವಿರುದ್ಧ

ಸಾರ್ವಜನಿಕರಿಂದ 274 ದೂರುಗಳ ಸಲ್ಲಿಕೆಯಾಗಿದ್ದು, 86 ಪ್ರಕರಣಗಳನ್ನು ಇತ್ಯರ್ಥ ‌ಪಡಿಸಲಾಗಿದ್ದು, 188 ಬಾಕಿ ಉಳಿದಿದೆ ಎಂದು ವಿವರಿಸಿದರು. ಡಿಸಿ ಪ್ರಶಾಂತ ಕುಮಾರ ಮಿಶ್ರಾ, ಎಸ್ಪಿ ಡಾ.ವಿ.ಜೆ. ಶೋಭಾರಾಣಿ ಇದ್ದರು.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net