ಪ್ರಮುಖ ಇಲಾಖೆ ಅಧಿಕಾರಿಗಳ ವಿರುದ್ಧ ಸುಮೋಟೊ

Published on

 ಬಂಗಾರಪೇಟೆ: ಸೂಕ್ತ ದಾಖಲೆ ನಿರ್ವಹಿಸದ ತಾಲೂಕಿನ 7 ವಿವಿಧ ಪ್ರಮುಖ ಇಲಾಖಾ ಅಧಿಕಾರಿಗಳ ವಿರುದ್ಧ ಸುಮೋಟೊ ಕೇಸ್​ ದಾಖಲಿಸಲಾಗುವುದು ಎಂದು ಉಪ ಲೋಕಾಯುಕ್ತ ವೀರಪ್ಪ ಹೇಳಿದರು.

ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೆಳಗ್ಗೆಯಿಂದ ಸಂಜೆವರೆಗೂ 10 ಇಲಾಖೆಗಳ ಮೇಲೆ ದಾಳಿ ನಡೆಸಿದಾಗ 7 ಇಲಾಖೆಗಳಲ್ಲಿ ಸರಿಯಾದ ಮಾಹಿತಿ ನೀಡಿಲ್ಲ. ಹಾಗಾಗಿ ಕಂದಾಯ ಇಲಾಖೆ, ಸಬ್​ ರಿಜಿಸ್ಟ್ರಾರ್​, ಸಾರ್ವಜನಿಕ ಆಸ್ಪತ್ರೆ, ಪುರಸಭೆ, ತಾಲೂಕು ಪಂಚಾಯತಿ, ಸಿಡಿಪಿಒ, ಸರ್ವೇ ಇಲಾಖೆ ಎಡಿಎಲ್​ಆರ್​, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಸುಮೊಟೋ ಕೇಸ್​ ಹಾಕಲಾಗುವುದು ಎಂದರು.

ಆಸ್ಪತ್ರೆಯಲ್ಲಿ ಕುಡಿಯುವ ನೀರಿನ ವಾಟರ್​ ಪ್ಲಾಂಟನ್ನು ಮಕ್ಕಳು ನೀರು ಕುಡಿಯಲು ಆಗದ ರೀತಿಯ ಎತ್ತರದಲ್ಲಿ ಫಿಕ್ಸ್​ ಮಾಡಲಾಗಿದೆ. ಡಾಕ್ಟರ್​ಗೆ ಸರಿಯಾಗಿ ಚಾರ್ಜ್​ ಹಾಕಿಲ್ಲ. ವೈದ್ಯರು ಕೇಂದ್ರ ಸ್ಥಾನದಲ್ಲಿಲ್ಲದ ಕಾರಣ ದೂರು ದಾಖಲಿಸಲಾಗುವುದು ಎಂದರು.

ರೆಕಾಡ್ಸ್​ ರೂಮ್​ ಇನ್​ಚಾರ್ಜ್​ ವಿನೋದ್​, ಎಡಿಎಲ್​ಆರ್​ ಪರಶಿವಮೂರ್ತಿ, ಸಬ್​ ರಿಜಿಸ್ಟ್ರಾರ್​ ಕಚೇರಿಯ ಮುರಳಿ ಹೊರ ಗುತ್ತಿಗೆ ನೌಕರ ವಿಜಯ್​ಕುಮಾರ್​ ಮೇಲೂ ಸುಮೊಟೋ ಕೇಸ್​ ಹಾಕುತ್ತೇನೆ ಎಂದರು.

ಪುರಸಭೆ ಮುಖ್ಯಾಧಿಕಾರಿ ಹೇಳಿಕೆ ಸಮಾಧಾನ ತಂದಿಲ್ಲ. ಒತ್ತುವರಿ ಬಗ್ಗೆ ಸರಿಯಾದ ಮಾಹಿತಿ ನೀಡಿಲ್ಲ ಎಂದ ಅವರು, ತಾಪಂನಲ್ಲಿ 1 ಕೋಟಿ ನರೇಗಾ ಯೋಜನೆ ಕಾಮಗಾರಿ ನಡೆದಿದೆ ಎಂದು ಇಒ ಹೇಳಿದ್ದಾರೆ. ಆದರೆ ಮಾಹಿತಿ ಕೊಟ್ಟಿಲ್ಲ. 2024-25 ಸಾಲಿನಲ್ಲಿ 10 ಕೋಟಿ ರೂ. ಅನುದಾನ ರ್ಖಚಾಗಿದೆ ಎಂದು ಸಿಡಿಪಿಒ ಹೇಳಿದ್ದಾರೆ. ಸರಿಯಾಗಿ ದಾಖಲೆ ನೀಡಿಲ್ಲ. ಕೃಷಿ ಅಧಿಕಾರಿ ಬಿಲ್​ ಆಗೋ ಮೊದಲೇ ಬ್ಲಾಂಕ್​ ಪೇಪರ್​ ಮೇಲೆ ಸಹಿ ಹಾಕಿಸಲಾಗಿದೆ. ಅವರ ಕರ್ತವ್ಯ ಸಮಾಧಾನ ತಂದಿಲ್ಲ.ಹಾಗಾಗಿ ಇವರೆಲ್ಲರ ಮೇಲೂ ಪ್ರಕರಣ ದಾಖಲಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net