

ಹರಿಹರ: ಗ್ರಾಹಕರ ಹೆಸರಿನಲ್ಲಿ ನಕಲಿ ಸಾಲ ಸೃಷ್ಟಿಸಿ, ಅವರ ಖಾತೆಯಿಂದ ಹಣ ಕಡಿತ ಮಾಡಿಕೊಳ್ಳಲಾಗುತ್ತಿತ್ತು ಎನ್ನಲಾದ ಪ್ರಕರಣವೊಂದರಲ್ಲಿ ಇಲ್ಲಿನ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಬುಧವಾರ ಎರಡು ಹಣಕಾಸು ಸಂಸ್ಥೆಗಳ ಪ್ರಮುಖರಿಗೆ ಸಮನ್ಸ್ ಜಾರಿ ಮಾಡಿದೆ.
ಖಾಸಗಿ ಬ್ಯಾಂಕ್ ಹಾಗೂ ಫೈನಾನ್ಸ್ ಒಂದಕ್ಕೆ ಸಂಬಂಧಿಸಿದಂತೆ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮಾಜಿ ನೌಕರರು ಸೇರಿ ಆರು ಮಂದಿ ಆರೋಪಿಗಳಿಗೆ ಆ.3ರಂದು ನ್ಯಾಯಾಲಯಕ್ಕೆ ಖುದ್ದು ಹಾಜರಾಗಲು ಆದೇಶಿಸಿದೆ.
ಪ್ರಕರಣ ವಿವರ: ನಗರದ ಜಿ.ಎಂ.ನವೀನ್ ಇವರ ಬ್ಯಾಂಕ್‌ನ ಉಳಿತಾಯ ಖಾತೆಯಿಂದ 2017ರ ಡಿಸೆಂಬರ್ ತಿಂಗಳಿನಿಂದ ಅಪರಿಚಿತ ಸಾಲ ಖಾತೆಯೊಂದಕ್ಕೆ ಮಾಸಿಕ 4013 ರೂ. ಹಣ ಕಡಿತವಾಗುತ್ತಿತ್ತು. ಪಡೆಯದ ಸಾಲಕ್ಕೆ ಖಾತೆಯಿಂದ ಹಣ ಪಡೆಯಬಾರದೆಂದು ಮನವಿ ಮಾಡಿದ್ದರೂ ಬ್ಯಾಂಕ್ ಅಧಿಕಾರಿಗಳು ಸ್ಪಂದಿಸಿರಲಿಲ್ಲ ಎನ್ನಲಾಗಿದೆ.
ನಂತರ ಪರಿಶೀಲಿಸಿದಾಗ ನವೀನ್ ಹೆಸರಿನಲ್ಲಿ ಹರಿಹರದ ಎಂಟರ್‌ಪ್ರೈಸಸ್ ಒಂದರಲ್ಲಿ 45,000 ರೂ. ಬೆಲೆಯ ಯಾವುದೋ ಸರಕು ಖರೀದಿಸಿದಂತೆ ಬಿಲ್ ಸೃಷ್ಟಿಸಿ, ಫೈನಾನ್ಸ್‌ನಲ್ಲಿ ನಕಲಿ ಸಾಲ ಪಡೆದು, ಅದರ ಕಂತುಗಳನ್ನು ಅವರ ಉಳಿತಾಯ ಖಾತೆಯಿಂದ ಸ್ವಯಂ ಜಮೆ ಮಾಡಿಕೊಳ್ಳುತ್ತಿರುವುದು ತಿಳಿದಿದ್ದರಿಂದ 2018ರ ಜ.4ರಂದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು.
ನ್ಯಾಯಾಲಯದ ಆದೇಶದಂತೆ ಪ್ರಕರಣದ ತನಿಖೆ ನಡೆಸಿದ ನಗರ ಠಾಣೆ ಪೊಲೀಸರು ಸಾಕ್ಷ್ಯಾಧಾರಗಳ ಕೊರತೆ ಇದೆ. ದೂರಿನಲ್ಲಿ ಸತ್ಯಾಂಶವಿಲ್ಲ ಎಂಬುದಾಗಿ ಬಿ ವರದಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪ್ರತಿಭಟನಾ ಅರ್ಜಿ ಸಲ್ಲಿಸಿದ್ದ ನವೀನ್ ಪರ ವಕೀಲರು, ಆರೋಪಿಗಳು ತಪ್ಪೆಸಗಿರುವುದು ಮೇಲ್ನೋಟದಲ್ಲೇ ಕಾಣುತ್ತಿದೆ ಎಂಬ ಅಂಶವನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರಿಂದ ನ್ಯಾಯಾಧೀಶರಾದ ಜ್ಯೋತಿ ಅಶೋಕ್ ಪತ್ತಾರ್, ಆರೋಪಿಗಳ ವಿರುದ್ಧ ವಿಚಾರಣೆ ನಡೆಸುವ ನಿರ್ಣಯಕ್ಕೆ ಬಂದು, ಅವರ ಹಾಜರಾತಿಗೆ ಆದೇಶಿಸಿದ್ದಾರೆ.
ವಕೀಲರಾದ ಬಿ.ಎಂ.ಸಿದ್ದಲಿಂಗಸ್ವಾಮಿ, ಟಿ.ಇನಾಯತ್ ಉಲ್ಲಾ, ಜಿ.ಎಚ್. ಭಾಗೀರಥಿ ದೂರುದಾರರ ಪರವಾಗಿ ವಾದ ಮಂಡಿಸಿದ್ದರು.
ಕಾಟಾಚಾರದ ತನಿಖೆ: ನಕಲಿ ಜಾಲದಿಂದಾಗಿ ಅಮಾಯಕರು ವಂಚನೆಗೀಡಾಗಿದ್ದಾರೆ. ಪೊಲೀಸರೆ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಿ, ತಪ್ಪಿತಸ್ಥರನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕಿತ್ತು. ಕಾಟಾಚಾರದ ತನಿಖೆ ನಡೆಸಿ, ಆರೋಪವೇ ಸುಳ್ಳೆಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಪ್ರಕರಣದ ಗಂಭೀರತೆ ಮನಗಂಡಿರುವ ನ್ಯಾಯಾಲಯ, ವಿಚಾರಣೆ ಆರಂಭಿಸಲಿದೆ.
ಬಿ.ಎಂ.ಸಿದ್ದಲಿಂಗಸ್ವಾಮಿ, ವಕೀಲರು.
ನಾನು ಕಂಪನಿಯೊಂದರ ನೌಕರನೆಂಬಂತೆ ನಕಲಿ ವೇತನ ದೃಢೀಕರಣ ಪತ್ರ ಸೃಷ್ಟಿಸಲಾಗಿದೆ. ಹೆಚ್ಚಿನ ಸೇವಾವಧಿ ತೋರಿಸಲು ಜನ್ಮ ದಿನಾಂಕ ತಿದ್ದಿರುವ ನಕಲಿ ಆಧಾರ್ ಕಾರ್ಡ್, ಖಾತೆಯಿಂದ 18 ವರ್ಷದವರೆಗೆ ಹಣ ಜಮೆ ಮಾಡಿಕೊಳ್ಳಲು ಸೃಷ್ಟಿಸಿರುವ ನಕಲಿ ಇಸಿಎಸ್ (ಒಪ್ಪಿಗೆ ಪತ್ರ) ಮುಂತಾದ ದಾಖಲೆಗಳು ದೊರೆತಿದ್ದರೂ ಪೊಲೀಸರು ನನ್ನ ಆರೋಪ ಸುಳ್ಳೆಂದು ವರದಿ ಸಲ್ಲಿಸಿದ್ದರು.
l ಜಿ.ಎಂ.ನವೀನ್, ದೂರುದಾರ.