

ಹರೀಶ್ ಮೋಟುಕಾನ ಮಂಗಳೂರು
ಭಾರಿ ಮಳೆಯಿಂದ ಭೂ ಕುಸಿತ, ಪ್ರವಾಹ ಕಂಡಿದ್ದ ಕರಾವಳಿ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬರದ ಛಾಯೆ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ನದಿ, ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ದಿಢೀರ್ ಕುಸಿತ ಕಂಡಿದೆ.
ಕರಾವಳಿಯಲ್ಲಿ ಸಾಮಾನ್ಯವಾಗಿ ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಕೆರೆ, ಬಾವಿ ನೀರು ತಳ ಸೇರುತ್ತಿತ್ತು. ಆದರೆ ಈ ವರ್ಷ ಬಾವಿಗಳಲ್ಲಿ ಫೆಬ್ರವರಿಯಲ್ಲಿ ಇರಬೇಕಾದ ನೀರಿನ ಮಟ್ಟ ಈಗಲೇ ಕಂಡು ಬಂದಿದೆ. ಮೇಲ್ಮಟ್ಟದ ಭೂಮಿಯ ಪದರಲ್ಲಿ ನೀರಿನ ತೇವಾಂಶ ಕೂಡ ಆರಿ ಹೋಗಿದೆ. ತೋಟ, ಗದ್ದೆಗಳಿಗೆ ಬಾವಿಯಿಂದಲೇ ನೀರು ಹಾಯಿಸಲಾಗುತ್ತಿದ್ದು, ಅಂತರ್ಜಲ ಇನ್ನಷ್ಟು ಕುಸಿಯುತ್ತಿದೆ.
ಏನು ಕಾರಣ?: ಈ ಬಾರಿ ಮುಂಗಾರು ಮಳೆ ಭರ್ಜರಿಯಾಗಿ ಸುರಿದಿತ್ತು. ಹಾಗಾಗಿ ಬೇಸಿಗೆಯಲ್ಲಿ ನೀರಿನ ಕೊರತೆಯಾಗದು ಎಂದು ಅಂದಾಜಿಸಲಾಗಿತ್ತು. ಆದರೆ ಪರಿಸ್ಥಿತಿ ಭಿನ್ನವಾಗಿದೆ. ಇದಕ್ಕೆ ಪರಿಸರವಾದಿಗಳು, ಭೂವಿಜ್ಞಾನಿಗಳು ನೀಡುತ್ತಿರುವ ಕಾರಣ ಕಂಡುಕೇಳರಿಯದ ಭೂಕುಸಿತ, ಪ್ರವಾಹ.
ಪಶ್ಚಿಮ ಘಟ್ಟದಲ್ಲಿ ಉಂಟಾದ ಭೂ ಕುಸಿತದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಎಲ್ಲ ನದಿ ತೋಡುಗಳೆಲ್ಲ ಪ್ರವಾಹ ರೂಪಿಯಾಗಿ ಕೃಷಿ ಸೇರಿದಂತೆ ಜನಜೀವನಕ್ಕೆ ಅಪಾರ ಹಾನಿ ಸಂಭವಿಸಿತ್ತು. ಇದರಿಂದಾಗಿ ನೂರಾರು ಎಕರೆ ಪ್ರದೇಶದ ಮರಗಳು ನಾಶವಾಗಿವೆ. ಭೂಮಿಯ ಮೇಲ್ಮೈ ಪೂರ್ತಿಯಾಗಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಎಷ್ಟೇ ಮಳೆಯಾದರೂ ನೀರನ್ನು ಹಿಡಿದಿಟ್ಟುಕೊಳ್ಳುವ ನೆಲದ ಗುಣ ಇಲ್ಲವಾಗಿದೆ. ಕಡಲ ತಡಿಯ ಮರಳು ಮಿಶ್ರಿತ ಮಣ್ಣಿಗೆ ನೀರು ಹಿಡಿದಿಡುವ ಗುಣ ಇಲ್ಲದಿರುವುದರಿಂದ ಮಳೆಗಾಲದ ನೀರೆಲ್ಲ ಸಮುದ್ರಪಾಲಾಗಿದೆ. ಉಷ್ಣಾಂಶದಲ್ಲಿ ಭಾರಿ ಏರಿಕೆಗೂ ಇದೇ ಕಾರಣ ಎನ್ನುತ್ತಾರೆ ತಜ್ಞರು.
ನವೆಂಬರ್, ಡಿಸೆಂಬರ್‌ನಲ್ಲಿ ಹಿಂಗಾರು ಮಳೆಯಾಗುವುದು ವಾಡಿಕೆ. ಈ ಮಳೆಯಾದರೆ ನೀರಿನ ಒರತೆ ಉತ್ತಮವಾಗಿರುತ್ತದೆ. ಈ ಬಾರಿ ಹಿಂಗಾರು ಮಳೆ ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ. ದಕ್ಷಿಣ ಕನ್ನಡದ ಜೀವನದಿ ನೇತ್ರಾವತಿಯಲ್ಲಿ ಈಗಲೇ ನೀರಿನ ಮಟ್ಟ ಕಡಿಮೆಯಾಗಿದೆ. ಈ ವರ್ಷ ಕೃಷಿಗೆ ಮಾತ್ರವಲ್ಲ ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ ಎಂಬುದು ಕೃಷಿಕರ ಆತಂಕ.
ಬಾವಿ ತೋಡಿದರೆ ಸಾಮಾನ್ಯವಾಗಿ 10-25 ಅಡಿ ಆಳದಲ್ಲಿ ನೀರು ಸಿಗುತ್ತಿತ್ತು. ಈಗ ಬೋರ್‌ವೆಲ್ ಹಾವಳಿ ಹೆಚ್ಚಿದ್ದು, 300-400 ಅಡಿ ಕೊರೆಯ ಬೇಕಾಗಿದೆ. ಇದರಿಂದಲೂ ಅಂತರ್ಜಲ ಮಟ್ಟ ತೀವ್ರ ಕುಸಿಯಲು ಕಾರಣವಾಗಿದೆ. ಜನತೆ ಪ್ರಕೃತಿಯ ಮೇಲೆ ಮಾಡಿದ ದೌರ್ಜನ್ಯಕ್ಕೆ ಸರಿಯಾಗಿ ಪ್ರತಿಫಲ ಅನುಭವಿಸುವ ಕಾಲ ಬಂದಿದೆ ಎಂದು ರೈತ ಮುಖಂಡ ಮನೋಹರ ಶೆಟ್ಟಿ ಹೇಳುತ್ತಾರೆ.
ಮಂಗಳೂರಿಗೂ ಬಿಸಿ ತಟ್ಟುವ ಸಾಧ್ಯತೆ
ಕುಡಿಯುವ ನೀರಿನ ಅಭಾವದ ಬಿಸಿ ಮಂಗಳೂರು ಜನತೆಗೆ ಈ ಬಾರಿ ಕಳೆದ ವರ್ಷಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ತಟ್ಟಲಿದೆ. ಕಳೆದ ಬಾರಿ ವಾರಕ್ಕೆ ಮೂರು ದಿನ ನೀರು ಕೊಡಲಾಗುತ್ತಿತ್ತು. ಈ ವರ್ಷ ವಾರಕ್ಕೊಂದು ದಿನ ನೀರು ಬಿಡುವ ಪರಿಸ್ಥಿತಿ ಉಂಟಾದರೆ ಅಚ್ಚರಿಯಿಲ್ಲ.
ಅಡಿ ಸೇರಿದ ಅಂತರ್ಜಲ: ಮಂಗಳೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಮೂಲಕ ಇತಿಹಾಸ ನಿರ್ಮಿಸಿದೆ. ಚಳಿಗಾಲದಲ್ಲೂ ವಿಪರೀತ ಸೆಕೆ ಇದೆ. ಆಗಸ್ಟ್‌ನಲ್ಲಿ ದ.ಕ. ಜಿಲ್ಲೆಯಲ್ಲಿ ನೆಲಮಟ್ಟದಿಂದ ಕೆಳಗೆ ನೀರಿನ ಮಟ್ಟ (ಅಂದರ್ಜಲ) 3.2 ಮೀ. ಆಸುಪಾಸಿನಲ್ಲಿದ್ದರೆ, ಅಕ್ಟೋಬರ್ ತಿಂಗಳಿನಲ್ಲಿ 9 ಮೀ.ಗೆ ದಿಢೀರ್ ಕುಸಿದಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಇದು 11.14 ಮೀ. ಆಳಕ್ಕೆ ತಲುಪಿದೆ. ಬೇಸಿಗೆಯಲ್ಲಿ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ ಎಂದು ಅಂತರ್ಜಲ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಘಟ್ಟದ ಮೇಲೆ ಮಾನವನ ಆಕ್ರಮಣದಿಂದ ಈ ವರ್ಷ ಪಶ್ಚಿಮ ಘಟ್ಟದ ಅಲ್ಲಲ್ಲಿ ಭೂ ಕುಸಿತ ಸಂಭವಿಸಿದೆ. ಕೆಳ ಭಾಗದಲ್ಲಿರುವ ನೇತ್ರಾವತಿಯ 9 ಉಪನದಿಗಳಿಗೆ ತೀವ್ರ ರೂಪದಲ್ಲಿ ಹೊಡೆತ ಉಂಟಾಗಿದೆ. ಇದರಿಂದ ಕೆಳಭಾಗದಲ್ಲಿರುವ ನದಿಯ ಫಲಾನುಭವಿಗಳಿಗೆ ನೀರಿನ ಅಭಾವ ಉಂಟಾಗಲಿದೆ.- ದಿನೇಶ್ ಹೊಳ್ಳ, ಪರಿಸರ ಹೋರಾಟಗಾರ ಪ್ರತಿವರ್ಷ ಬಾವಿ ನೀರು ಏಪ್ರಿಲ್, ಮೇ ತಿಂಗಳ ತನಕ ಕುಡಿಯಲು ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಈ ವರ್ಷ ಈಗಲೇ ಬತ್ತಿ ಹೋಗಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಪ್ರವಾಹ ಬಂದ ನದಿಗಳು ಬತ್ತಲಾರಂಭಿಸಿವೆ. ಫೆಬ್ರವರಿ ಕೊನೇ ವಾರದ ಬಳಿಕ ಸಣ್ಣ ನದಿಗಳಿಗೆ ಹಾಕುತ್ತಿದ್ದ ಕಟ್ಟಗಳನ್ನು ಕೆಲವು ಕಡೆ ಈಗಲೇ ಹಾಕಲು ಆರಂಭಿಸಿದ್ದಾರೆ.- ರಮೇಶ್ ನಾಯಕ್, ಬೆಳ್ತಂಗಡಿ ಪಶ್ಚಿಮ ಘಟ್ಟದಲ್ಲಿ ಸಂಭವಿಸಿದ ಭೂ ಕುಸಿತವೇ ಈ ಬಾರಿ ಬಾವಿ, ಕೆರೆ, ನದಿಗಳು ಬತ್ತಿ ಹೋಗಲು ಪ್ರಮುಖ ಕಾರಣ. ಭೂ ಕುಸಿತದ ಸಂದರ್ಭ ಸಾವಿರಾರು ಮರಗಳು, 30 ಅಡಿಗಳಷ್ಟು ಮಣ್ಣು ಕೊಚ್ಚಿಕೊಂಡು ಹೋಗಿದೆ. ಆ ಬಳಿಕ ಮಳೆ ನೀರು ನೇರವಾಗಿ ಹರಿದು ಹೋಗಿದೆ. ಅಂತರ್ಜಲ ಮಟ್ಟ ಕುಸಿದಿದೆ. ಈಗ ಬಿಸಿಲು ನೇರವಾಗಿ ನೆಲಕ್ಕೆ ಬೀಳುವುದರಿಂದ ನೀರು ಆವಿಯಾಗುವ ವೇಗ ಹೆಚ್ಚಿದೆ. ತರಗೆಲೆಗಳಿಗೆ ನೀರನ್ನು ಇಂಗಿಸಿಕೊಳ್ಳುವ ಸಾಮರ್ಥ್ಯ ಇದೆ. ಆದರೆ ಇವೆಲ್ಲವೂ ಕೊಚ್ಚಿ ಹೋಗಿರುವುದರಿಂದ ತೇವಾಂಶವೇ ಇಲ್ಲದಂತಾಗಿದೆ. ಇದರಿಂದ ನದಿ ಮೂಲಗಳಲ್ಲಿ ಒರತೆ ಬಹು ಬೇಗನೆ ಬತ್ತಿ ಹೋಗಿವೆ.- ಪ್ರೊ.ಗಂಗಾಧರ ಭಟ್, ಪ್ರಾಧ್ಯಾಪಕರು, ಸಾಗರ, ಭೂ ವಿಜ್ಞಾನ ವಿಭಾಗ, ಮಂಗಳೂರು ವಿ.ವಿ.