

ಮಂಗಳೂರು: ಕರಾವಳಿಯ ನಾನಾ ಭಾಗದಲ್ಲಿ ಗುರುವಾರ ಹಾಗೂ ಶುಕ್ರವಾರ ಬೇಸಿಗೆ ಮಳೆಯ ಮೂಲಕ ಇಳೆಯನ್ನು ತಣಿಸುವ ಕೆಲಸವಾಗಿದೆ. ಈಗಾಗಲೇ ಐಎಂಡಿ ಅಧಿಕಾರಿಗಳು ಮೂರು ದಿನಗಳ ಕಾಲ ಬೇಸಿಗೆ ಮಳೆಯಾಗಲಿದೆ ಎಂದು ವರದಿ ನೀಡಿದ್ದರು ಈಗ ಅದಕ್ಕೆ ಪೂರಕವಾಗುವಂತೆ ಬೇಸಿಗೆ ಮಳೆಯಾಗುತ್ತಿದೆ.
ವಿಶೇಷವಾಗಿ ಸುಳ್ಯ, ಸುಬ್ರಹ್ಮಣ್ಯಘಿ, ಬೆಳ್ತಂಗಡಿ, ಪುತ್ತೂರು ಭಾಗದಲ್ಲಿ ಶ್ರೀಸಾಮಾನ್ಯದಿಂದ ಸಾಧಾರಣ ಮಳೆಯಾಗಿದೆ. ಮಂಗಳೂರಿನ ಕೆಲವು ಭಾಗದಲ್ಲಿ ಹನಿ ಮಳೆಯಾಗಿದೆ. ಇನ್ನೆರಡು ದಿನಗಳ ಕಾಲ ಜಿಲ್ಲೆಯ ಎಲ್ಲ ಭಾಗದಲ್ಲೂ ಮಳೆಯಾಗುವ ಸಾಧ್ಯತೆಯಿದೆ.
*ಮಳೆ ಸಾಧ್ಯತೆ
ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಾದ್ಯಂತ ಏ.20 ಹಾಗು 21 ರಂದು ಸಂಜೆ ಮೋಡ ಕವಿದ ವಾತಾವರಣದೊಂದಿಗೆ ಉತ್ತಮ ಮಳೆಯ ಮುನ್ಸೂಚನೆ ಇದೆ ಎಂದು ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ. ಕರಾವಳಿಯಾಧ್ಯಂತ ಹಗಲು ಸಾಧಾರಣ ಹೀಟ್ವೇವ್ (ಉಷ್ಣ ಗಾಳಿ) ಮುಂದುವರಿದಿದೆ. ಕರಾವಳಿಯಲ್ಲಿ ಗರಿಷ್ಠ ತಾಪಮಾನ 38.1 ಡಿ.ಸೆ., ಕನಿಷ್ಠ ತಾಪಮಾನ 24.2 ಡಿ.ಸೆ. ದಾಖಲಾಗಿದೆ. ದ.ಕ ಉಡುಪಿ ಹಾಗು ಉತ್ತರ ಕನ್ನಡದಲ್ಲಿ ಗರಿಷ್ಠ ತಾಪಮಾನದಲ್ಲಿ ಸದ್ಯ 39.6 ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾದರೆ, ಕಾರವಾರ, ಗೋಕಾರ್ಣ ಮತ್ತು ಮಂಗಳೂರಿನಲ್ಲಿ ಉಷ್ಣ ಗಾಳಿ ಪ್ರಭಾವ ಹೆಚ್ಚಾಗಿದೆ.
*ಬಿಸಿಲಿನ ಪ್ರಮಾಣ ಸ್ಥಿರ
ಏ.20ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಬಹುತೇಕ ಭಾಗಗಳಲ್ಲಿ ಬಿಸಿಲಿನ ಪ್ರಮಾಣ ಸ್ಥಿರವಾಗಲಿದ್ದು, ಸಾಯಂಕಾಲ ವೇಳೆ ಮೋಡ ಮುಸುಕಿದ ವಾತಾವರಣ, ತಡರಾತ್ರಿ ಒಂದೆರಡು ಪ್ರದೇಶಗಳಲ್ಲಿ ತುಂತುರು ಮಳೆಯ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ರಾಷ್ಟ್ರೀಯ ಹವಾಮಾನ ಮನ್ಸೂಚನಾ ಕೇಂದ್ರದ ಮುನ್ಸೂಚನೆಯಂತೆ ಈ ವಾರದ ಕೋನೆಯಲ್ಲಿ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ.