

ಕೋಟ/ ಬ್ರಹ್ಮಾವರ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11,070 ಹಾಗೂ ಉಡುಪಿ ಜಿಲ್ಲೆಯಲ್ಲಿ 36,000 ಹೆಕ್ಟೇರ್ ಭತ್ತ ಬೆಳೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಮುಂಗಾರು ಪೂರ್ವದಲ್ಲಿ ಉತ್ತಮ ಮಳೆಯಾಗುತ್ತಿರುವುದು ಭತ್ತ ಬೆಳೆಗೆ ಪೂರಕ ವಾತಾವರಣ ಸೃಷ್ಟಿಸಿದೆ.
ಈ ಮುಂಗಾರು ಹಂಗಾಮಿನಲ್ಲಿ ಉಡುಪಿ ತಾಲೂಕಲ್ಲಿ 15,500, ಕುಂದಾಪುರದಲ್ಲಿ 14,000, ಕಾರ್ಕಳದಲ್ಲಿ 6,500 ಹೆಕ್ಟೇರ್ ಭತ್ತ ಬೆಳೆಯುವ ಗುರಿ ಇರಿಸಿಕೊಳ್ಳಲಾಗಿದೆ. ಹಡೀಲು ಗದ್ದೆಗಳಲ್ಲಿ ಭತ್ತ ಬೆಳೆ ಉತ್ತೇಜಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲು ಕೃಷಿ ಇಲಾಖೆ ನಿರ್ಧರಿಸಿದೆ. ಬಿತ್ತನೆ ಬೀಜಕ್ಕೆ ಈಗಾಗಲೇ ಬೇಡಿಕೆ ಬಂದಿದ್ದು, ಉಡುಪಿ ಜಿಲ್ಲೆಯಲ್ಲಿ ಎಂಒ4 ಮತ್ತು ಉಮಾ ತಳಿಯ 120 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜ ವಿತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೃಷಿ ಚಟುವಟಿಕೆ ಆರಂಭ
ಬ್ರಹ್ಮಾವರ ಭಾಗದಲ್ಲಿ ಸದ್ಯ ಭತ್ತದ ಕೃಷಿಯ ಚಟುವಟಿಕೆ ಆರಂಭಗೊಂಡಿದೆ. ಉಳುಮೆ ಮಾಡಿ ಮಣ್ಣು ಹದಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಉಡುಪಿ, ಬ್ರಹ್ಮಾವರ, ಕೋಟ, ಕುಂದಾಪುರದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಮತ್ತು ಸುಣ್ಣ, ಕಳೆ ನಾಶಕವಾಗಿ ಸೆಣಬಿನ ಬೀಜ ಪಡೆಯಲು ಕೃಷಿಕರು ಸಾಲಾಗಿ ನಿಲ್ಲುತ್ತಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಆ ವಿಧಾನಸಭಾ ಕ್ಷೇತ್ರದ ಹಡೀಲು ಭೂಮಿಯಲ್ಲಿ ಭತ್ತ ನಾಟಿಗೆ ಸಿದ್ಧತೆ ನಡೆದಿದೆ. ಉಡುಪಿ ರೈತ ಸಂಪರ್ಕ ಕೇಂದ್ರದಲ್ಲಿ ಈ ವರ್ಷ ಬಿತ್ತನೆ ಬೀಜ ಹೆಚ್ಚು ಸಂಗ್ರಹಿಸಿದ್ದು, ಲಾಕ್‌ಡೌನ್ ಮಾರ್ಗಸೂಚಿಯಿಂದಾಗಿ ಬೆಳಗ್ಗೆ 6ರಿಂದ 10ರ ತನಕ ವಿತರಣೆ ನಡೆಯುತ್ತದೆ.
ಲಾಕ್‌ಡೌನ್ ನಡುವೆಯೇ ಸಿದ್ಧತೆ
ಕೋಟ ಹೋಬಳಿಯಲ್ಲಿ ಲಾಕ್‌ಡೌನ್ ಮಧ್ಯೆ ರೈತರು ಬೇಸಾಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಭತ್ತದ ಬೀಜದ ಖರೀದಿಯೂ ಆರಂಭವಾಗಿದೆ. ಕೋಟ ಹೋಬಳಿಯ ರೈತರು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದ 240 ಕ್ವಿಂಟಾಲ್ ಎಂ.ಒ4 ಭತ್ತದ ಬೀಜ ಖರೀದಿಸಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ಎಂಒ4, ಉಮಾ ಮತ್ತು ಜ್ಯೋತಿ ಒಟ್ಟು ಸಾವಿರ ಕ್ವಿಂಟಾಲ್ ಭತ್ತದ ಬೀಜಕ್ಕೆ ಬೇಡಿಕೆ ಬಂದಿದೆ. ಜೂನ್ ಮೊದಲ ವಾರದಲ್ಲೇ ನಾಟಿ ಕಾರ್ಯ ಆರಂಭಿಸಲಾಗುತ್ತದೆ. ಹೋಬಳಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ನಲ್ಲಿ ಬೇಸಾಯ ಮಾಡುತ್ತಿದ್ದು, ಸಕಾಲಕ್ಕೆ ಬಿತ್ತನೆ ಬೀಜ ಒದಗಿಸುವ ಕಾರ್ಯ ಮಾಡುವಂತೆ ಕೋಟದ ರೈತಧ್ವನಿಯ ಅಧ್ಯಕ್ಷ ಜಯರಾಮ್ ಶೆಟ್ಟಿ ಆಗ್ರಹಿಸಿದ್ದಾರೆ.
ಎಂ.ಒ 4 ಭತ್ತದ ಬೀಜ ಲಭ್ಯ
ಕೋಟ ರೈತ ಸಂಪರ್ಕ ಕೇಂದ್ರದಲ್ಲಿ ಸದ್ಯ ಎಂ.ಒ 4 ಬೀಜ ಲಭ್ಯವಿದೆ. ಪ್ರಸ್ತುತ ಕೆಜಿಗೆ 31 ರೂ. ನಿಗದಿಯಾಗಿದ್ದು, ಒಂದು ಎಕರೆ ಕೃಷಿ ಆರ್‌ಟಿಸಿ ಇದ್ದು 25 ಕೆಜಿ ಚೀಲ ಖರೀದಿ ಮಾಡಿದಲ್ಲಿ 200 ರೂಪಾಯಿವರೆಗೆ ಸಬ್ಸಿಡಿ ಸಿಗುತ್ತದೆ. ಕಳೆದ ವರ್ಷ ಕೋಟ ಹೋಬಳಿಯಲ್ಲಿ 120 ಕ್ವಿಂಟಾಲ್ ಬೀಜ ಮಾರಾಟವಾಗಿದ್ದು, ಈ ವರ್ಷ 450 ಸಾವಿರ ಕ್ವಿಂಟಾಲ್ ಮಾರಾಟದ ಗುರಿ ಹೊಂದಿದ್ದೇವೆ ಎಂದು ಕೋಟದ ಕೃಷಿ ಅಧಿಕಾರಿ ಸುಪ್ರಭಾ ವಿಜಯವಾಣಿಗೆ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಹಡೀಲು ಭೂಮಿ ಕೃಷಿಗೆ ಈ ಬಾರಿ ಹೆಚ್ಚಿನ ಆದ್ಯತೆ ಮತ್ತು ಕರೊನಾದಿಂದ ಉದ್ಯೋಗ ಕಳೆದುಕೊಂಡು ಮನೆಗೆ ಬಂದವರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಕಾರಣ ಎರಡೂ ಹೋಬಳಿಯಲ್ಲಿ ಕೃಷಿಗೆ ಹೆಚ್ಚಿನ ಮಹತ್ವ ಬಂದಿದೆಯಲ್ಲದೆ ನಾಟಿ ಕಾರ್ಯ ಹೆಚ್ಚಲಿದೆ.
ಎಂ.ಜಯರಾಮ್ ಶೆಟ್ಟಿ
ಕೋಟ ರೈತಧ್ವನಿ ಸಂಘ ಅಧ್ಯಕ್ಷ
ಕಳೆದ ವರ್ಷ ಶಾಲಾ ವಿದ್ಯಾರ್ಥಿಗಳಿಂದ ಭತ್ತದ ಕೃಷಿ ಮಾಡಲಾಗಿದೆ. ಶಾಸಕ ರಘುಪತಿ ಭಟ್ ಅವರ ಹೊಸ ಕಲ್ಪನೆಯಲ್ಲಿ ನಮ್ಮ ಪರಿಸರ ಮತ್ತು ಗ್ರಾಮದಲ್ಲಿರುವ ಹಡೀಲು ಭೂಮಿಯನ್ನು ಈ ವರ್ಷ ಖಾಲಿ ಬಿಡದೆ ಬಹುತೇಕ ಭತ್ತದ ಕೃಷಿ ಮಾಡುತ್ತೇವೆ.
ಬಿ.ಎಂ. ರವೀಂದ್ರನಾಥ್ ಶೆಟ್ಟಿ ಶಿವಳ್ಳಿ, ಕೃಷಿಕ
ಉಡುಪಿ ಹೋಬಳಿಯ 25 ಗ್ರಾಮದಲ್ಲಿ ಈ ವರ್ಷ ನಮ್ಮಲ್ಲಿ ಈಗಾಗಲೇ 240 ಕ್ವಿಂಟಾಲ್ ಬಿತ್ತನೆ ಬೀಜ, 2250 ಕೆಜಿ ಸೆಣಬಿನ ಬೀಜ, 60 ಕ್ವಿಂಟಾಲ್ ಸುಣ್ಣವನ್ನು ಈ ತನಕ ರೈತರಿಗೆ ವಿತರಿಸಲಾಗಿದೆ. ಇನ್ನೂ ಕೂಡಾ ಬೇಡಿಕೆ ಇದೆ ಅದನ್ನು ರೈತರಿಗೆ ನೀಡಲಾಗುವುದು.
ವೃಂದಾ, ಉಡುಪಿ ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ